ಹೈದರಾಬಾದ್: ಎಷ್ಟೇ ವಿಡಿಯೋ ಪೋಸ್ಟ್ ಮಾಡಿದರೂ ವ್ಯೂವ್ಸ್ ಬರುತ್ತಿಲ್ಲ ಅಂತ ಮನನೊಂದು ಯೂಟ್ಯೂಬರ್ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ದೀನಾ (24) ಮೃತ ಯೂಟ್ಯೂಬರ್. ಈತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಸೆಲ್ಫ್ಪ್ಲೋ ಹೆಸರಿನಲ್ಲಿ ಗೇಮಿಂಗ್ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಆದರೆ, ವ್ಯೂವ್ಸ್ ಬರುತ್ತಿಲ್ಲ ಅಂತ ಮನನೊಂದು ಐದು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಹೈದರಾಬಾದ್ನ ಸೈದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕ್ರಾಂತಿ ನಗರ ಕಾಲನಿಯಲ್ಲಿ ಗುರುವಾರ ನಡೆದಿದೆ. ಐಐಟಿ ಗ್ವಾಲಿಯರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ಲೈವ್ ಗೇಮ್ಗೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಎಷ್ಟೇ ಪ್ರಯತ್ನ ಮಾಡಿದರೂ ವೀಕ್ಷಕರು ಹೆಚ್ಚಾಗುತ್ತಿಲ್ಲವಲ್ಲ ಎಂದು ಬೇಸರಗೊಂಡಿದ್ದ. ಅಲ್ಲದೆ, ಯೂಟ್ಯೂಬ್ನಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದ.
ಇದಾದ ಸ್ವಲ್ಪದ ಸಮಯದ ನಂತರ ಕಟ್ಟಡದಿಂದ ಜಿಗಿದು ದೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಸೈದಾಬಾದ್ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದ ಮರಣೋತ್ತರ ಪರೀಕ್ಷೆಗೆ ಒಸ್ಮಾನಿಯ ಶವಾಗಾರಕ್ಕೆ ರವಾನಿಸಿದ್ದಾರೆ.
ಘಟನಾ ಸ್ಥಳದಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದೆ. ಸದ್ಯ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)