ಹೈದರಾಬಾದ್: ಬಿಸಿನೆಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬನಿಗೆ ಬಲೆ ಬೀಸಿದ ಮಾಯಾಂಗನೆ ಆತನಿಂದ ಬರೋಬ್ಬರಿ 1.20 ಕೋಟಿ ರೂಪಾಯಿ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಅಂಬರಪೇಟ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅರ್ಚನಾ (24) ಎಂಬಾಕೆ ಅಂಬರ್ಪೇಟೆಯ ದೀದೀ ಕಾಲನಿಯ ನಿವಾಸಿ. ಈಕೆಯ ತಂದೆ ಶ್ರೀನಿವಾಸ್ ಪ್ರಿಂಟಿಂಗ್ ಪ್ರೆಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ಯೂಟಿಷಿಯನ್ ಕೊರ್ಸ್ ಮುಗಿಸಿರುವ ಅರ್ಚನಾ, ಕುಕಟಪಲ್ಲಿ ಮತ್ತು ದಿಲ್ಶುಕ್ನಗರದಲ್ಲಿ ಪ್ರತ್ಯೇಕ ಬ್ಯೂಟಿ ಪಾರ್ಲರ್ಗಳನ್ನು ನಡೆಸುತ್ತಿದ್ದಳು. ಈ ಸಮಯದಲ್ಲಿ ಆನ್ಲೈನ್ ಮೂಲಕ ಆಂಧ್ರ ಪ್ರದೇಶದ ಗುಂಟೂರು ಮೂಲದ ಸುಬ್ಬಾರೆಡ್ಡಿ (35) ಎಂಬಾತನ ಪರಿಚಯ ಆಗಿದೆ.
ಇಬ್ಬರ ಪರಿಚಯ ಸಲುಗೆಗೆ ತಿರುಗಿದಾಗ ತನ್ನ ಉದ್ಯಮದಲ್ಲಿ ಹಣ ಹೂಡುವಂತೆ ಅರ್ಚನಾ ಸುಬ್ಬಾರೆಡ್ಡಿ ಬಳಿ ಕೇಳಿಕೊಂಡಿದ್ದಾಳೆ. ಅಲ್ಲದೆ, ಹೆಚ್ಚಿನ ಹಣ ಕೊಡುವುದಾಗಿಯೂ ಹೇಳಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಮಾಯಾಂಗನೆಯ ಫೋಟೋ ನೋಡಿ ಬಲೆ ಬಿದ್ದಿದ್ದ ಸುಬ್ಬಾರೆಡ್ಡಿ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್ ಮಾಡುವುದನ್ನು ಮುಂದುವರಿಸಿದ್ದ. ಆಕೆಯ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಸುಬ್ಬಾರೆಡ್ಡಿ ಹಂತ ಹಂತವಾಗಿ ಆನ್ಲೈನ್ ಮೂಲಕ ಕಳೆದ ಡಿಸೆಂಬರ್ನಿಂದ ಆಗಸ್ಟ್ವರೆಗೆ 1.20 ಕೋಟಿ ರೂಪಾಯಿ ಹಣವನ್ನು ಅರ್ಚನಾ ಖಾತೆಗೆ ಜಮಾ ಮಾಡಿದ್ದ.
ಹಣ ಬಂದು ಖಾತೆಗೆ ಜಮೆಯಾದ ಕೂಡಲೇ ತನ್ನ ವರಸೆ ಬದಲಿಸಿದ ಅರ್ಚನಾ ಅಂದಿನಿಂದ ಸುಬ್ಬಾರೆಡ್ಡಿಗೆ ಕೈಗೆ ಸಿಕ್ಕದೇ ನುಣುಚಿಕೊಳ್ಳುತ್ತಿದ್ದಳು. ನೇರವಾಗಿ ಮಾತನಾಡೋಣ ಅಂದ್ರೆ ಆಕೆಯ ಸುಳಿವು ಆತನಿಗೆ ಸಿಕ್ಕಿರಲಿಲ್ಲ. ಇನ್ನು ಅರ್ಚನಾಗೆ ಬಾಯ್ಫ್ರೆಂಡ್ ಅನಿಲ್ ಕುಮಾರ್ ಜತೆ ಸಂಬಂಧ ಇತ್ತು. ಸುಬ್ಬಾರೆಡ್ಡಿಯಿಂದ ಪೀಕಿದ್ದ ಹಣದಿಂದ ಭಾರೀ ಪ್ರಮಾಣ ಚಿನ್ನಾಭರಣ ಮತ್ತು ಕಾರನ್ನು ಖರೀದಿಸಿದ್ದಳು. ಇತ್ತ ಫೋನ್ ಮೂಲಕ ಸುಬ್ಬಾರೆಡ್ಡಿ ಅರ್ಚನಾಳ ಸಂಪರ್ಕಿಸಿ ತನ್ನ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದ. ಆರಂಭದಿಂದ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬರ್ತಿದ್ದ ಅರ್ಚನಾ ಕೊನೆಗೆ ತನ್ನ ಕರಾಳ ಮುಖವನ್ನು ತೋರಿಸಿ, ಬಾಯ್ಫ್ರೆಂಡ್ ಜತೆ ಸೇರಿಕೊಂಡು ಸುಬ್ಬಾರೆಡ್ಡಿ ಕೊಲೆ ಬೆದರಿಕೆ ಹಾಕಿದ್ದಳು.
ಕೊನೆಗೆ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಸುಬ್ಬಾರೆಡ್ಡಿ, ಅರ್ಚನಾ ವಿಳಾಸವನ್ನು ಹೇಗೋ ಪತ್ತೆ ಮಾಡಿದ. ಆಕೆ ಹೈದರಾಬಾದಿನಲ್ಲಿ ವಾಸವಿರುವುದು ತಿಳಿಯಿತು. ಬಳಿಕ ಇದೇ ತಿಂಗಳ 1ನೇ ತಾರೀಖಿನಂದು ಹೈದರಾಬಾದ್ಗೆ ಆಗಮಿಸಿದ ಸುಬ್ಬಾರೆಡ್ಡಿ ಅಂಬರಪೇಟೆ ಪೊಲೀಸ್ ಠಾಣೆಯಲ್ಲಿ ಅರ್ಚನಾ ವಿರುದ್ಧ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅರ್ಚನಾ, ಸಾಯಿರಾಮ್ ಮತ್ತು ಅನಿಲ್ ಕುಮಾರ್ನನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. (ಏಜೆನ್ಸೀಸ್)