ನ್ಯೂಸ್

ಲೇಡಿ ಕಾನ್ಸ್​ಟೇಬಲ್​ ವಿರುದ್ಧವೇ ಹನಿಟ್ರ್ಯಾಪ್ ಆರೋಪ! ಸಂತ್ರಸ್ತ ಯುವಕನಿಂದ ಸುಂದರಿಯ ಕರಾಳ ಮುಖ ಬಯಲು

ಹೈದರಾಬಾದ್​: ನಂಬಿಸಿ ಮದುವೆಯಾದ ಯುವಕ ವಂಚನೆ ಮಾಡಿದ್ದಾನೆಂದು ದೂರು ದಾಖಲಿಸಿರುವ ಹೈದರಬಾದ್​​ನ ಮಹಿಳಾ ಕಾನ್ಸ್​ಟೇಬಲ್​ ಪ್ರಕರಣವೀಗ ತಿರುವು ಪಡೆದುಕೊಂಡಿದ್ದು, ಇಡೀ ಪ್ರಕರಣದಲ್ಲಿ ಆಕೆಯೇ ಖಳನಾಯಕಿ ಎನ್ನಲಾಗಿದೆ.

ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್​ ಮಾಡಿ ಹಣ ಪೀಕಿರುವ ಆರೋಪ ಮಹಿಳಾ ಕಾನ್ಸ್​ಟೇಬಲ್​ ವಿರುದ್ಧವೇ ಕೇಳಿಬಂದಿದೆ. ಎಆರ್​ ಮುಖ್ಯಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಾನ್ಸ್​ಟೇಬಲ್​ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಂತ್ರಸ್ತರನ್ನು ಹೆದರಿಸುತ್ತಿದ್ದರು ಎಂದು ಹೇಳಲಾಗಿದೆ.

ಆರೋಪಿ ಕಾನ್ಸ್​ಟೇಬಲ್​ನನ್ನು ಸಂಧ್ಯಾರಾಣಿ (28) ಎಂದು ಗುರುತಿಸಲಾಗಿದೆ. ಈ ಹಿಂದೆಯೇ ಈಕೆಗೆ ಮೂರು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾಳೆ. ಓರ್ವ ಪತಿ ಈಕೆಯ ಕಿರುಕುಳವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇತ್ತೀಚೆಗೆ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ ಚರಣ್​ತೇಜ ಎಂಬಾತನನ್ನು ಸಂಧ್ಯಾರಾಣಿ ತನ್ನ ಬಲೆಗೆ ಕೆಡವಿದ್ದಳು. ಬಳಿಕ ಆತನನ್ನು ಬಲವಂತವಾಗಿ ಒಪ್ಪಿಸಿ ಮದುವೆ ಸಹ ಆಗಿದ್ದಳು. ಮದುವೆ ಆಗದಿದ್ದರೆ, ಎಸ್​ಸಿ-ಎಸ್​ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದಳು.

ಇದಾದ ಬಳಿಕ ಚರಣ್​ ಶಮ್ಶಾಬಾದ್​ ಡಿಸಿಪಿ ಮತ್ತು ಶಬಾದ್​ ಪೊಲೀಸ್​ ಠಾಣೆಗೆ ಈಮೇಲ್​ ಮೂಲಕ ದೂರು ನೀಡಿದ್ದನು. ಈ ಹಿಂದೆಯೇ ಮದುವೆ ಆಗಿದ್ದ ವಿಚಾರವನ್ನು ಮುಚ್ಚಿಟ್ಟು ಬೆದರಿಸಿ ಮದುವೆ ಆಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಮದುವೆಯಾಗದ ಯುವಕರನ್ನು ಟಾರ್ಗೆಟ್​ ಮಾಡಿ ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್​ ಮಾಡಿದ ಬಳಿಕ ಬೆದರಿಸಿ ಹಣ ಕಸಿಯುತ್ತಿದ್ದಳು ಎಂದು ದೂರಿದ್ದಾನೆ.

ಈ ಹಿಂದೆಯು ಒಮ್ಮೆ ಸಂಧ್ಯಾರಾಣಿ ವಿರುದ್ಧ ಇದೇ ರೀತಿಯ ದೂರು ಸಹ ದಾಖಲಾಗಿದೆ. ಇನ್ನು ಸಂಧ್ಯಾಗೆ ಮನೆಯಿದ್ದರೂ ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಬಾಡಿಗೆ ಪಡೆದುಕೊಂಡಿದ್ದಳು. ಅಲ್ಲಿಯೇ ಸಂತ್ರಸ್ತರೊಂದಿಗೆ ಸಮಯ ಕಳೆಯುತ್ತಾ ತನ್ನ ಕಾರ್ಯ ಸಾಧಿಸುತ್ತಿದ್ದಳು ಎಂದು ತಿಳಿದುಬಂದಿದೆ.

ಇದೀಗ ಆಕೆಯಿಂದ ಮೋಸ ಹೋಗಿರುವ ಚರಣ್​, ದೂರು ನೀಡಿದ್ದು, ಆಕೆಯನ್ನು ಜವಬ್ದಾರಿಯುತ ಪೊಲೀಸ್​ ಕೆಲಸದಿಂದ ತೆಗೆಯುವಂತೆ ಒತ್ತಾಯಿಸಿದ್ದಾನೆ.

ಭಾನುವಾರವಷ್ಟೇ ಜುಬಿಲಿಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ ಸಂಧ್ಯಾರಾಣಿ, ನನಗೆ ಮದುವೆಯಾಗಿ 7 ವರ್ಷದ ಮಗಳಿರುವ ವಿಚಾರ ತಿಳಿದು, ಬಾಂಡ್​ ಪೇಪರ್​ ಸಹಿ ಹಾಕಿಯೇ ಚರಣ್​ ಮದುವೆ ಆಗಿದ್ದರು. ಜತೆಯಲ್ಲಿಯೇ ಇದ್ದ ಅವರು ನಾಲ್ಕು ದಿನಗಳಿಂದ ಮನೆಗೆ ಬಂದಿಲ್ಲ ಎಂದು ಆರೋಪಿಸಿದ್ದಳು. (ಏಜೆನ್ಸೀಸ್​)