ಹೈದರಾಬಾದ್: ಜುಲೈ 6ರಂದು ಹೈದರಾಬಾದ್ನ ಹಸ್ತಿನಾಪುಂರನಲ್ಲಿನ ಬಿ.ಎನ್. ರೆಡ್ಡಿ ನಗರದಲ್ಲಿ ವಿವಾಹಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವನಸ್ಥಲಿಪುರಂ ಠಾಣಾ ಪೊಲೀಸರು ಮರ್ರೆಡ್ಪಲ್ಲಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ನನ್ನು ಬಂಧಿಸಿದ್ದಾರೆ.
ಆರೋಪಿ ಇನ್ಸ್ಪೆಕ್ಟರ್ನನ್ನು ನಾಗೇಶ್ವರ್ ರಾವ್ ಎಂದು ಗುರುತಿಸಲಾಗಿದೆ. ಗಂಡನಿಲ್ಲದ ಸಮಯದಲ್ಲಿ ಮಹಿಳೆಯ ಮೇಲೆ ನಾಗೇಶ್ವರ್, ಅತ್ಯಾಚಾರ ಎಸಗಿದ್ದ. ಅಲ್ಲದೆ, ಆಕೆಯ ಗಂಡ ಮನೆಗೆ ಬಂದಾಗ ಆತನನ್ನು ಗನ್ ತೋರಿಸಿ, ಬೆದರಿಕೆ ಹಾಕಿದ್ದ. ಇದಾದ ಬಳಿಕ ಗಂಡ-ಹೆಂಡತಿಯನ್ನು ತನ್ನ ಕಾರಿನಲ್ಲಿ ಅಪಹರಿಸಿಕೊಂಡು ಹೋಗುವಾಗ ಇಬ್ರಾಹಿಂಪಟ್ಟಣ ಕೆರೆಯ ಬಳಿ ಕಾರು ಅಪಘಾತಕ್ಕೀಡಾಗಿದ್ದರಿಂದ ಗಂಡ-ಹೆಂಡತಿ ತಪ್ಪಿಸಿಕೊಂಡು ಬಂದು ವನಸ್ಥಲಿಪುರಂನಲ್ಲಿ ದೂರು ದಾಖಲಿಸಿದ್ದರು.
ಇದೀಗ ಆರೋಪಿ ನಾಗೇಶ್ವರ್ ರಾವ್ರನ್ನು ಬಂಧಿಸಲಾಗಿದ್ದು, ಅತ್ಯಾಚಾರ, ಅಪಹರಣ ಹಾಗೂ ಆಯುಧಗಳಿಂದ ಬೆದರಿಕೆ ಹಾಕಿದ್ದು ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಹೈದರಾಬಾದ್ ಪೊಲೀಸ್ ಕಮಿಷನರ್ ಅವರು ನಾಗೇಶ್ವರ ರಾವ್ ಅವರನ್ನು ಜುಬಿಲಿ ಹಿಲ್ಸ್ ಠಾಣೆಯಿಂದ ಮಾರ್ರೆಡ್ಪಲ್ಲಿಗೆ ವರ್ಗಾವಣೆ ಮಾಡಿದ್ದರು. ಅವರು ಪಡ್ಡಿಂಗ್ ಮತ್ತು ಮಿಂಕ್ ಪಬ್ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ. ಸಿಐ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ರಿಮಾಂಡ್‌ಗೆ ಕಳುಹಿಸಲಾಗುವುದು ಎಂದು ವನಸ್ಥಲಿಪುರಂ ಠಾಣಾ ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಕಳೆದ ಶುಕ್ರವಾರ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. 2018ರಲ್ಲಿ ಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ತನಿಖೆಯನ್ನು ಸಿಐ ನಾಗೇಶ್ವರ್ ರಾವ್ ನಡೆಸಿದ್ದರು. ನನ್ನ ಗಂಡ ಬಿಡುಗಡೆಯಾದ ಬಳಿಕ ನಾಗೇಶ್ವರ್, ಒತ್ತಾಯದ ಮೇರೆಗೆ ಅವರ ಫಾರ್ಮ್ಹೌಸ್ನಲ್ಲೇ ಕೆಲಸ ಮಾಡುತ್ತಿದ್ದರು. 2021ರ ಫೆಬ್ರವರಿ ವರೆಗೆ ನನ್ನ ಪತಿ ಫಾರ್ಮ್ ಹೌಸ್ನಲ್ಲಿ ದುಡಿದರು. ಒಂದು ದಿನ ನನ್ನ ಪತಿ, ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ತಿಳಿಯದಂತೆ ನನ್ನನ್ನು ಬಲವಂತವಾಗಿ ಅವರ ಕೃಷಿ ಭೂಮಿಗೆ ಕರೆತಂದಿದ್ದರು. ಈ ವಿಚಾರ ತಿಳಿದು ತಕ್ಷಣವೇ ನನ್ನ ಪತಿ, ನಾಗೇಶ್ವರ್ ರಾವ್ಗೆ ಕರೆ ಮಾಡಿ, ಕುಟುಂಬಕ್ಕೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರು. ನಿಮ್ಮ ವರ್ತನೆಯ ಬಗ್ಗೆ ನಿಮ್ಮ ಹೆಂಡತಿಗೆ ತಿಳಿಸುವುದಾಗಿ ಇನ್ಸ್ಪೆಕ್ಟರ್ಗೆ ಎಚ್ಚರಿಸಿದ್ದರು.
ಇದಾದ ಬಳಿಕ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡುವಂತೆ ನಾಗೇಶ್ವರ್ ಕೇಳಿಕೊಂಡರು. ಆದರೆ, ಇದಾದ ಬಳಿಕ ಅವರು ತಮ್ಮ ನರಿಬುದ್ಧಿಯನ್ನು ತೋರಿಸಿದರು. ಕೆಲವು ಪೊಲೀಸರು ನಮ್ಮ ಮನೆಗೆ ಬಂದು ಪತಿಯನ್ನು ಟಾಸ್ಕ್‌ಫೋರ್ಸ್ ಪೊಲೀಸ್ ಕಚೇರಿಗೆ ಕರೆದೊಯ್ದು ಥಳಿಸಿದರು. ಪತಿಯ ಕೈಯಲ್ಲಿ ಗಾಂಜಾ ಪೊಟ್ಟಣಗಳನ್ನು ಕೊಟ್ಟು ಸುಳ್ಳು ಪ್ರಕರಣ ದಾಖಲಿಸಿದರು. ಯಾವುದೇ ವಿಚಾರವನ್ನು ನಮ್ಮ ಮನೆಗೆ ತಿಳಿಸಿದರೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ನಾಗೇಶ್ವರ್ ಬೆದರಿಕೆ ಹಾಕಿದರು.
ಜುಲೈ 6 ರಂದು ನಾಗೇಶ್ವರ್ ರಾವ್ ಗಂಡನಿಲ್ಲದ ಸಮಯದಲ್ಲಿ ನನ್ನ ಮನೆಗೆ ಬಂದು ಲೈಂಗಿಕ ಆಸೆಗಳನ್ನು ಪೂರೈಸುವಂತೆ ಕೇಳಿದರು ಮತ್ತು ಕೆಟ್ಟ ಭಾಷೆಯನ್ನೂ ಬಳಸಿದರು. ಈ ವಿಚಾರವನ್ನು ನನ್ನ ಪತಿಗೆ ಹೇಳಿದೆ. ತಕ್ಷಣ ಅವರು ಮನೆಗೆ ಬಂದರು. ಆದರೆ, ಜುಲೈ 7ರಂದು ಮನೆಗೆ ನುಗ್ಗಿದ ನಾಗೇಶ್ವರ್, ಚೆನ್ನಾಗಿ ಥಳಿಸಿ, ಅತ್ಯಾಚಾರ ಎಸಗಿದರು. ಇದೇ ಸಂದರ್ಭದಲ್ಲಿ ಮನೆಗೆ ಬಂದ ನನ್ನ ಪತಿ ದೊಣ್ಣೆಯಿಂದ ನಾಗೇಶ್ವರ್ ಮೇಲೆ ದಾಳಿ ಮಾಡಲು ಮುಂದಾದರು. ಈ ವೇಳೆ ರಿವಾಲ್ವರ್ ತೋರಿಸಿ ಬೆದರಿಸಿದರು. ಹೈದರಾಬಾದ್ ತೊರೆಯುವಂತೆ ಒತ್ತಾಯಿಸಿದರು. ಬಳಿಕ ಕಾರಿನಲ್ಲಿ ನಮ್ಮನ್ನು ಬಲವಂತವಾಗಿ ಕೂರಿಸಿಕೊಂಡು ಹೋಗುತ್ತಿರುವಾಗ ಕಾರು ಅಪಘಾತಕ್ಕೀಡಾಯಿತು. ನಾವು ಅವರಿಂದ ತಪ್ಪಿಸಿಕೊಂಡು ಬಂದೆವು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)