ನ್ಯೂಸ್

VIDEO| ಟೇಕಾಫ್​ ಆದ ಬೆನ್ನಲ್ಲೇ ವಿದ್ಯುತ್​ ತಂತಿಗೆ ಡಿಕ್ಕಿಯಾಗಿ ಹೆಲಿಕಾಪ್ಟರ್​ ಪತನ: ಸಂಸದ ಸೇರಿ ನಾಲ್ವರ ಸ್ಥಿತಿ ಗಂಭೀರ ​

ಬ್ರಾಸಿಲಿಯಾ: ಟೇಕಾಫ್​ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್​ ತಂತಿಗೆ ಸಿಲುಕಿದ ಹೆಲಿಕಾಪ್ಟರ್​ ನೆಲಕ್ಕೆ ಅಪ್ಪಳಿಸಿ ಪತನಗೊಂಡಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಬ್ರೆಜಿಲ್​ ರಾಜ್ಯ ಮಿನಾಸ್​ ಗೆರೈಸ್​ನ ಎಂಜೆನ್ಹೈರೊ ಕ್ಯಾಲ್ಡಾಸ್ ಎಂಬಲ್ಲಿ ಬುಧವಾರ ಸಂಭವಿಸಿದೆ. ಆರಂಭದಲ್ಲಿ ಗಾಳಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಚಾಪರ್, ಕೆಲವೇ ದೂರ ಕ್ರಮಿಸುತ್ತಿದ್ದಂತೆ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು, ನೆಲಕ್ಕೆ ಅಪ್ಪಳಿಸುವ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಇದೆ.

ಮರುಚುನಾವಣೆಗೆ ಸ್ಪರ್ಧಿಸುತ್ತಿರುವ ಬ್ರೆಜಿಲ್ ಸಂಸದ ಹರ್ಸಿಲಿಯೊ ಅರಾಜೊ ಡಿನಿಜ್ (59) ಮತ್ತು ಗವರ್ನಡಾರ್ ವಲಡಾರೆಸ್‌ನ ಉಪ ಮೇಯರ್ ಡೇವಿಡ್ ಬರೊಸೊ (45) ಅವರನ್ನು ಚಾಪರ್​ ಹೊತ್ತೊಯ್ಯುತ್ತಿತ್ತು. ಫ್ಯಾಬಿಯಾನೊ ರುಫಿನೊ ಎಂಬ ಪೈಲಟ್ ಮತ್ತು ಡಿನಿಜ್ ಅವರ ಪ್ರಚಾರ ತಂಡದ ಸದಸ್ಯ ಲುಸಿಯಾನೊ ಸಹ ಚಾಪರ್​ನಲ್ಲಿದ್ದರು. ಪತನದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರೆಲ್ಲರನ್ನೂ ತಕ್ಷಣವೇ ರಕ್ಷಣೆ ಮಾಡಿ ಸಮೀಪ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ದಿ ಸನ್ ವರದಿ ಮಾಡಿದೆ.

ಚಾಪರ್​ ನಿಯಂತ್ರಣ ಕಳೆದುಕೊಂಡು ಎಲೆಕ್ಟ್ರಿಕಲ್ ಗ್ರಿಡ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಬದಿಯಲ್ಲಿ ಬಿದ್ದಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)