ಅಹಮದಾಬಾದ್: ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಗುಜರಾತ್ನ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್, ಇಂದು (ಜೂ.2) ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ಕೇಸರಿ ಟೋಪಿ ಮತ್ತು ಶಾಲು ನೀಡಿ ಹಾರ್ದಿಕ್ ಪಟೇಲ್ರನ್ನು ಬಿಜೆಪಿ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಹಾರ್ದಿಕ್ ಪಟೇಲ್, ರಾಷ್ಟ್ರೀಯ ಹಿತಾಸಕ್ತಿ, ಪ್ರಾದೇಶಿಕ ಹಿತಾಸಕ್ತಿ ಮತ್ತು ಸಾಮಾಜಿಕ ಹಿತಾಸಕ್ತಿಯ ಭಾವನೆಗಳೊಂದಿಗೆ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸೇವೆಯಲ್ಲಿ ನಾನು ಸಣ್ಣ ಸೈನಿಕನಾಗಿ ಸೇವೆ ಸಲ್ಲಿಸುತ್ತೇನೆ ಎಂದಿದ್ದಾರೆ.
28 ವರ್ಷದ ಹಾರ್ದಿಕ್ ಪಟೇಲ್, 2015ರಲ್ಲಿ ಗುಜರಾತ್ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. 2019ರಲ್ಲಿ ಕಾಂಗ್ರೆಸ್ನ ರಾಷ್ಟ್ರನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಪ್ರಭಾವಿ ಯುವ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಾರ್ದಿಕ್ ಕಳೆದ ತಿಂಗಳು 18ರಂದು ಕಾಂಗ್ರೆಸ್ ರಾಜೀನಾಮೆ ನೀಡಿದರು. ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. (ಏಜೆನ್ಸೀಸ್)