ಮಲ್ಕಂಗಿರಿ (ಒಡಿಶಾ): ಸರ್ಕಾರಿ ಅಧಿಕಾರಿಯೊಬ್ಬ ಅಮಾಯಕ ಯುವತಿಯನ್ನು ನಂಬಿಸಿ ವಂಚಿಸಿ, ಬಂಧಕ್ಕೀಡಾಗಿರುವ ಘಟನೆ ಒಡಿಶಾದ ಮಲ್ಕಂಗಿರಿಯಲ್ಲಿ ನಡೆದಿದೆ.
ಬಂಧಿತನನ್ನು ಅರಣ್ಯಾಧಿಕಾರಿ ಮುರಳೀಧರ್ ಎಂದು ಗುರುತಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಬುಡಕಟ್ಟು ಜನಾಂಗದ ಅಮಾಯಕ ಯುವತಿಯನ್ನು ಆರೋಪಿ ಮುರಳೀಧರ್ ತನ್ನ ಕ್ವಾರ್ಟರ್ಸ್ಗೆ ಕರೆಸಿಕೊಂಡಿದ್ದಾನೆ. ಬಂದವಳ ಬಳಿ ಬೆಣ್ಣೆಯಂತಹ ಮಾತುಗಳನ್ನಾಡಿದ್ದಾನೆ. ನಿನ್ನಂತಹ ಯುವತಿಯನ್ನೇ ನಾನು ಮದುವೆ ಆಗಬೇಕೆಂದುಕೊಂಡಿದ್ದೇನೆ. ನೀನು ಬಯಸಿದರೆ ಇಬ್ಬರು ಮದುವೆ ಆಗೋಣ ಎಂದಿದ್ದಾನೆ.
ಆರೋಪಿಯ ಮಾತಿಗೆ ಸಂತ್ರಸ್ತ ಯುವತಿ ಮರುಳಾಗಿದ್ದಾಳೆ. ಇದನ್ನು ಬಂಡವಾಳ ಮಾಡಿಕೊಂಡ ಮುರಳೀಧರ್, ಪ್ರೀತಿಯ ಹೆಸರಲ್ಲಿ ಆಕೆ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಕೆಲವು ದಿನಗಳ ಹಿಂದೆ ಮುರಳೀಧರ ಮತ್ತೊಂದು ಮದುವೆ ಆಗಿದ್ದಾನೆ. ಬಳಿಕ ಈ ವಿಚಾರ ಸಂತ್ರಸ್ತ ಯುವತಿಗೆ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುರಳೀಧರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)