ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊಟ್ಟಗುಡೇಮ್ ಜಿಲ್ಲೆಯ ಮುಲಕಲಪಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಅರಣ್ಯ ಸಿಬ್ಬಂದಿಯೊಬ್ಬ ಬುಡಕಟ್ಟು ಜನಾಂಗದ ಮಹಿಳೆಯರನ್ನು ಥಳಿಸಿ, ವಿವಸ್ತ್ರಗೊಳಿಸಿ ಮೃಗೀಯವಾಗಿ ಹಿಂಸಿಸಿದ್ದು, ಈ ಘಟನೆ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮುಲಕಪಲ್ಲಿ ಮಂಡಲದ ಕಡು ಗ್ರಾಮ ಸಕಿ ವಗು ಕಾಲನಿಯ ಬುಡಕಟ್ಟು ಸಮುದಾಯದ ನಾಲ್ವರು ಮಹಿಳೆಯರು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದರು. ಈ ವೇಳೆ ಅವರನ್ನು ನೋಡಿದ ಮಹೇಶ್ ಹೆಸರಿನ ಫಾರೆಸ್ಟ್ ಗಾರ್ಡ್ ಅವರೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿ ಮಹೇಶ್ ಒಬ್ಬ ಮಹಿಳೆಯರನ್ನು ಹಿಮ್ಮೆಟ್ಟಿಸಿ ಹೋಗಿ ಕೋಲಿನಿಂದ ಥಳಿಸಿರುವ ಆರೋಪ ಕೇಳಿಬಂದಿದೆ. ಆತನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಇನ್ನೊಬ್ಬ ಮಹಿಳೆ ಹಳ್ಳದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇಅಲ್ಲದೆ, ಯುವತಿಯೊಬ್ಬಳನ್ನು ತಡೆದು ನಿಲ್ಲಿಸಿದ ಮಹೇಶ್, ಆಕೆಯ ಕೆಳಭಾಗದ ಬಟ್ಟೆಯನ್ನು ಕಿತ್ತೆಸೆದು ಹಿಂಸಿಸಿದ್ದಾನೆ.
ಫಾರೆಸ್ಟ್ ಗಾರ್ಡ್ ಮಹೇಶ್ ನಾಲ್ವರು ಮಹಿಳೆಯರ ಮೇಲೆಯೂ ದುರ್ವತನೆ ತೋರಿರುವ ಆರೋಪವಿದೆ. ಕೋಲಿನಿಂದ ಮನಬಂದಂತೆ ಥಳಿಸಿ, ವಿವಸ್ತ್ರಗೊಳಿಸಿದ್ದಾನೆ. ಈ ವಿಚಾರ ಬುಡಕಟ್ಟು ಸಮುದಾಯಕ್ಕೆ ತಿಳಿದಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. (ಏಜೆನ್ಸೀಸ್)