ನ್ಯೂಸ್

ಭಾವ ಕರೆದನೆಂದು ಆತನ ಮನೆಗೆ ಹೋದ ಇಂಜಿನಿಯರ್​ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್​ ಶಾಕ್​!

ಹೈದರಾಬಾದ್​: ಇಂಜಿನಿಯರಿಂಗ್​ ವಿದ್ಯಾರ್ಥಿನಿಯೊಬ್ಬಳು ತನ್ನ ಸಂಬಂಧಿ ಯುವಕನಿಂದಲೇ ಕೊಲೆಯಾಗಿರುವ ಘಟನೆ ಹೈದರಾಬಾದ್​ನ ಕುಕುಟಪಲ್ಲಿಯಲ್ಲಿ ನಡೆದಿದೆ. ಯುವತಿಯನ್ನು ಉಸಿಗಟ್ಟಿಸಿ ಕೊಲೆ ಮಾಡಿ ಮೃತಹೇಹವನ್ನು ಸಂಪಿನೊಳಗೆ ಬೀಸಾಡಲಾಗಿತ್ತು.

ಈ ಭಯಾನಕ ಘಟನೆ ಶನಿವಾರ ನಡೆದಿದ್ದು, ಸೋಮವಾರ ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಮಂಜುಳಾ (19) ಎಂದು ಗುರುತಿಸಲಾಗಿದೆ. ಈಕೆ ಮೂಸಾಪೇಟೆಯ ನಿವಾಸಿ. ತನ್ನ ಮನಗೆ ಆಗಾಗ ಭೇಟಿ ನೀಡುತ್ತಿದ್ದ ಸಂಬಂಧಿ ಯುವಕ ಅಂದರೆ ವರಸೆಯಲ್ಲಿ ಭಾವನಾಗುವ ಭೂಪತಿ ಜತೆ ಸ್ನೇಹವನ್ನು ಹೊಂದಿದ್ದಳು.

ಕೆಲವು ವೈಯಕ್ತಿಕ ವಿಚಾರ ಮಾತನಾಡಬೇಕೆಂಬ ಸೋಗಿನಲ್ಲಿ ಶನಿವಾರ ಮಂಜುಳಾಳನ್ನು ಭೂಪತಿ ತನ್ನ ಮನೆಗೆ ಕರೆದಿದ್ದಾನೆ. ಬಂದವಳನ್ನು ಮಫ್ಲರ್​ ಅಥವಾ ಸ್ಕಾರ್ಪ್​ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಮೃತದೇಹವನ್ನು ಮನೆಯ ಹೊರಭಾಗದಲ್ಲಿದ್ದ ಸಂಪ್​ ಒಳಗೆ ಬೀಸಾಡಿ ಅಲ್ಲಿಂದ ಪರಾರಿಯಾಗಿದ್ದಾನೆಂದು ಕುಕಟಪಲ್ಲಿ ಪೊಲೀಸ್​ ಠಾಣಾಧಿಕಾರಿ ಟಿ. ನರ್ಸಿಂಗ್​ ರಾವ್​ ಮಾಹಿತಿ ನೀಡಿದ್ದಾರೆ.

ಮಂಜುಳಾಗಾಗಿ ಆಕೆಯ ಸಂಬಂಧಿಕರು ಶನಿವಾರದಿಂದ ಹುಡುಕಾಡುತ್ತಿದ್ದರು. ಪತ್ತೆಯಾಗದಿದ್ದಾಗ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಯಾವಾಗ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆಂದು ತಿಳಿಯಿಯೋ ಹೆದರಿದ ಭೂಪತಿ ತಾನೇ ಠಾಣೆಗೆ ತೆರಳಿ ಶರಣಾಗಿದ್ದಾನೆ. ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಮಂಜುಳಾಳನ್ನು ನನಗೆ ಕೊಟ್ಟು ಮದುವೆ ಮಾಡುವುದಾಗಿ ಚಿಕ್ಕಂದಿನಿಂದಲೇ ಮನೆಯವರು ಒಪ್ಪಂದ ಮಾಡಿಕೊಂಡಿದ್ದರು. ಆದಾಗ್ಯು ಕಳೆದ ಕೆಲ ವಾರಗಳಿಂದ ಇಬ್ಬರ ನಡುವೆ ಕೆಲವೊಂದು ಸಮಸ್ಯೆಗಳಿದ್ದವು. ನನ್ನನ್ನು ಕಡೆಗಣಿಸುತ್ತಿದ್ದಾಳೆ ಅನಿಸಿತು. ಅಲ್ಲದೆ, ಬೇರೊಬ್ಬನ ಜತೆ ಫೋನ್​ನಲ್ಲಿ ಮಾತನಾಡುವುದನ್ನು ನಾನು ಗಮನಿಸಿದ್ದೆ ಎಂದಿರುವ ಭೂಪತಿ, ಇನ್ನೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದು, ಈ ಎಲ್ಲ ಕಾರಣದಿಂದ ಆಕೆಯ ಮೇಲಿನ ಕೋಪದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ