ಮುಂಬೈ: ಭಾರತದಲ್ಲಿ ವರದಕ್ಷಿಣೆ ಪಡೆಯುವುದಿರಲಿ ಕೇಳುವುದೇ ಅಪರಾಧ. ಆದರೆ, ಅಪರಾಧ ಅಂತಾ ಗೊತ್ತಿದ್ದರೂ ದೇಶದಲ್ಲಿ ಶೇ. 95 ರಷ್ಟು ಮಂದಿ ವರದಕ್ಷಿಣೆಯಲ್ಲಿ ಒಳಗೊಂಡಿದ್ದಾರೆ. ವರದಕ್ಷಿಣೆಯನ್ನು ಸಾಮಾಜಿಕ ಬಿಕ್ಕಟ್ಟು ಎಂದು ಪರಿಗಣಿಸಲಾಗಿದ್ದು, ಎಲ್ಲೆಡೆ ಇದರ ಅಭ್ಯಾಸ ಮುಂದುವರಿದೇ ಇದೆ. ಅನೇಕ ಮಹಿಳೆಯರು ಇದರ ಪರಿಣಾಮವನ್ನು ಎದುರಿಸಿದ್ದು, ಸಾವಿನ ಕದವನ್ನು ತಟ್ಟಿದ್ದಾರೆ.
ವರದಕ್ಷಿಣೆಯಾಗಿ ಕೆಲವರು ಹಣ ಕೇಳಿದರೆ, ಇನ್ನು ಕೆಲವರು ಬಂಗಲೆ, ಚಿನ್ನ, ದುಬಾರಿ ಕಾರು ಸೇರಿದಂತೆ ಮುಂತಾದವುಗಳನ್ನು ಕೇಳುತ್ತಾರೆ. ಇದರಲ್ಲಿ ಅಚ್ಚರಿಯೇನಿಲ್ಲ. ಆದರೆ, ಮಹಾರಾಷ್ಟ್ರದ ಔರಂಗಬಾದ್ನಲ್ಲಿರುವ ಕುಟುಂಬವೊಂದು ವಿಚಿತ್ರ ವರದಕ್ಷಿಣೆ ಕೇಳಿ ಭಾರಿ ಸುದ್ದಿಯಾಗಿದ್ದಾರೆ.
ಔರಂಗಬಾದ್ ಮೂಲದ ಯುವಕನೊಂದಿಗೆ ಯುವತಿಯೊಬ್ಬಳಿಗೆ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಆಗಿತ್ತು. ಈ ಸಮಯದಲ್ಲಿ ವರದಕ್ಷಿಣೆಯಾಗಿ ವಧುವಿನ ಪಾಲಕರು 2 ಲಕ್ಷ ರೂಪಾಯಿ ನಗದು ಮತ್ತು ಚಿನ್ನವನ್ನು ನೀಡಿದ್ದರು. ಇದಾದ ಬಳಿಕ ಮದುವೆ ತಯಾರಿ ನಡೆಯುತ್ತಿತ್ತು. ಎಲ್ಲವು ಸರಿಯಾಗಿ ಸಾಗುತ್ತಿದೆ ಅನ್ನುವಷ್ಟರಲ್ಲಿ ವರ ತನ್ನ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾನೆ. ಇದನ್ನು ಕೇಳಿದ ವಧುವಿನ ಮನೆಯವರಿಗೆ ತಲೆ ಗಿರ್ ಅಂದಿದೆ.
ಹಾಗಾದ್ರೆ ವರ ಮುಂದಿಟ್ಟ ಬೇಡಿಕೆ ಯಾವುದು? ಅಂದರೆ, 10 ಲಕ್ಷ ರೂಪಾಯಿ ನಗದು ಹಣ. ಇಷ್ಟಕ್ಕೆ ಸುಮ್ಮನಾಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಬದಲಾಗಿ 21 ಉಗುರಿನ ಆಮೆ, ಒಂದು ಕಪ್ಪು ಬಣ್ಣದ ಲಾಬ್ರಡರ್ ನಾಯಿ, ಒಂದು ಬುದ್ಧನ ಗೊಂಬೆ ಮತ್ತು ರಾಬಿಟ್ ಲ್ಯಾಂಪ್ ಕೇಳಿದ್ದಾನೆ. ಇವಿಷ್ಟನ್ನು ನೀಡಿದರೆ ಮದುವೆ ಬಳಿಕ ನಿಮ್ಮ ಮಗಳಿಗೆ ಒಳ್ಳೆಯ ಕೆಸಲ ಸಿಗುತ್ತದೆ ಎಂದು ನಂಬಿರುವುದಾಗಿ ವರ ಹೇಳುತ್ತಾನೆ.
ವರನ ವಿಚಿತ್ರ ಬೇಡಿಕೆ ಕೇಳಿದ ವಧು ಮತ್ತು ಪಾಲಕರಿಗೆ ಶಾಕ್ ಆಗುತ್ತದೆ. ವಧುವಿನ ಮನೆಯವರು ಸಹ ಕೇಳಿದ್ದನ್ನೆಲ್ಲ ಕೊಡಲು ಯತ್ನಿಸುತ್ತಾರೆ. ಆದರೆ, ಅದು ಸಾಧ್ಯವಾಗದಿದ್ದಾಗ ವರನಿಗೆ ಮನವರಿಕೆ ಮಾಡಲು ಮುಂದಾಗುತ್ತಾರೆ. ಆದರೆ. ಕೇಳಿದ್ದನ್ನು ಕೊಡದಿದ್ದರೆ ಮದುವೆ ಆಗುವುದಿಲ್ಲ ಎಂದು ವರ ಹೇಳುತ್ತಾನೆ. ಏನು ಮಾಡಬೇಕೆಂದು ದಿಕ್ಕು ತೋಚದ ವಧುವಿನ ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡುತ್ತಾರೆ. ಇದಾದ ಬಳಿಕ ವಂಚನೆ ಪ್ರಕರಣ ದಾಖಲಿಸುವ ಪೊಲೀಸರು ವರನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)