ನವದೆಹಲಿ: ಐಫೋನ್ ಕೊಡಿಸುವುದಾಗಿ ಭರವಸೆ ನೀಡಿ, ಹಣ ಪಡೆದುಕೊಂಡು, ಮಾತಿಗೆ ತಪ್ಪಿದ 17 ವರ್ಷದ ಪಿಯು ವಿದ್ಯಾರ್ಥಿಯನ್ನು ಆತನ ಸ್ನೇಹಿತನೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಬಾಟ್ಲಾ ಹೌಸ್ ಏರಿಯಾದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿರುವುದಾಗಿ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಈ ಪ್ರಕರಣ ಬೇರೆ ತಿರುವು ಪಡೆದುಕೊಂಡಿತ್ತು. ಗುರಿತಪ್ಪಿದ ನಿಗೂಢ ಗುಂಡು ವಿದ್ಯಾರ್ಥಿಗೆ ತಗುಲಿ ಮೃತಪಟ್ಟಿದ್ದಾನೆಂದು ಮೊದಲು ನಂಬಲಾಗಿತ್ತು. ಆದರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅಬ್ದುಲ್ಲಾನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ಅಬ್ದುಲ್ಲಾ, ಖಾಲಿದ್ ಎಂಬಾತನಿಂದ ಐಫೋನ್ ಕೊಡಿಸುವುದಾಗಿ ಹೇಳಿ 72,000 ರೂಪಾಯಿಗಳನ್ನು ತೆಗೆದುಕೊಂಡಿದ್ದ ಎಂಬುದು ತಿಳಿದುಬಂದಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಖಾಲಿದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಖಾಲಿದ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಅಬ್ದುಲ್ಲಾ ಐಫೋನ್ ನೀಡಲಿಲ್ಲ ಮತ್ತು ಹಣವನ್ನೂ ಹಿಂದಿರುಗಿಸಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ಅಬ್ದುಲ್ಲಾಗೆ ಗುಂಡಿಟ್ಟು ಹತ್ಯೆ ಮಾಡಿದ್ದಾಗಿ ಖಾಲಿದ್ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್)