ನ್ಯೂಸ್

ಪಿಯು ವಿದ್ಯಾರ್ಥಿನಿಯ ಬದುಕಲ್ಲಿ ಎಂಟ್ರಿ ಕೊಟ್ಟ ನೆರೆಮನೆಯ ಪೊಲೀಸ್​ ಪೇದೆ: ಮುಂದಾಗಿದ್ದು ದುರಂತ ಅಂತ್ಯ

ತಿರುವನಂತಪುರಂ (ಕೇರಳ): ಪಿಯು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುವನಂತಪುರದ ಮೈಲಕ್ಕರ ಏರಿಯಾದಲ್ಲಿ ನಡೆದಿದ್ದು, ನೆರೆಮನೆಯ ಪೊಲೀಸ್​ ಪೇದೆಯೊಬ್ಬ ಮದುವೆ ಪ್ರಸ್ತಾಪ ಮಾಡಿದ ಬಳಿಕ ನಡೆದ ಘಟನೆಗಳ ಒತ್ತಡದಿಂದ ವಿದ್ಯಾರ್ಥಿನಿ ಸಾವಿನ ಹಾದಿ ಹಿಡಿದಿದ್ದಾಳೆ ಎಂದು ಕುಟುಂಬ ಆರೋಪ ಮಾಡಿದ್ದು, ದೂರು ದಾಖಲಿಸಿದೆ.

ಮೃತ ವಿದ್ಯಾರ್ಥಿನಿಯನ್ನು ತಸ್ಲಿಮಾ (18) ಎಂದು ಗುರುತಿಸಲಾಗಿದೆ. ಈಕೆ ದ್ವಿತೀಯ ಪಿಯು ವಿದ್ಯಾರ್ಥಿನಿ. ಬುಧವಾರ ತಮ್ಮ ಮನೆಯ ಶೌಚಗೃಹದಲ್ಲಿ ಮೃತದೇಹ ಪತ್ತೆಯಾಗಿತ್ತು. ಆಕೆಯ ಶವಪರೀಕ್ಷೆ ನಡೆಸಿ ನಂತರ ಆಕೆಯ ಶವವನ್ನು ಆಕೆಯ ಕುಟುಂಬಕ್ಕೆ ಒಪ್ಪಿಸಲಾಗಿದೆ.

ಕುಟುಂಬಸ್ಥರ ಪ್ರಕಾರ ತಸ್ಲಿಮಾ ನೆರಮನೆಯ ಪೊಲಿಸ್​ ಪೇದೆ ಅಖಿಲ್​ (32) ಜತೆಗಿನ ಸಂಬಂಧದಿಂದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಅಖಿಲ್​​, ತಸ್ಲಿಮಾ ಕುಟುಂಬದ ಮುಂದೆ ಮದುವೆ ಪಸ್ತಾಪವನ್ನು ಮುಂದಿಟ್ಟಿದ್ದರಂತೆ. ಆಕೆಯ ಕುಟುಂಬದ ಮನವೊಲಿಸಲು ಅಖಿಲ್​ ತುಂಬಾ ಕಸರತ್ತು ಮಾಡಿದ್ದ. ಆದಾಗ್ಯೂ ತಸ್ಲಿಮಾ ಕುಟುಂಬ ಆಕೆ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ, ಸದ್ಯಕ್ಕೆ ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿತ್ತು. ಆದರೂ, ತಸ್ಲಿಮಾ ಮತ್ತು ಅಖಿಲ್​ ನಡುವೆ ಸಂಬಂಧ ಇತ್ತು. ಇದು ಗೊತ್ತಾದ ಬಳಿಕ ಇಬ್ಬರಿಗೂ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಆದರೆ, ಇದು ಅಖಿಲ್​ ಕುಟುಂಬಕ್ಕೆ ಇಷ್ಟವಿರಲಿಲ್ಲ. ಅಖಿಲ್​ ಕುಟುಂಬ 10 ಲಕ್ಷ ರೂ. ವರದಕ್ಷಿಣೆ ಮತ್ತು 25 ಸವರನ್​ ಚಿನ್ನವನ್ನು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿತ್ತು ಎಂದು ತಸ್ಲಿಮಾ ಕುಟುಂಬ ಆರೋಪಿಸಿದೆ.

ಇದರ ನಡುವೆ ತಸ್ಲಿಮಾ ಇನ್ನೊಂದು ಯುವತಿಯ ಜತೆ ಸಂಬಂಧ ಬೆಳೆಸಿದ್ದ. ತಸ್ಲಿಮಾಳಿಂದ ಅಂತರ ಕಾಯ್ದುಕೊಂಡಿದ್ದರೂ ಆಕೆಗೆ ಪದೇಪದೆ ಫೋನ್​ ಮಾಡಿ ಕಿರುಕುಳ ನೀಡುತ್ತಿದ್ದ. ತಸ್ಲಿಮಾ ಮೃತದೇಹ ಪತ್ತೆಯಾಗುವ ಹಿಂದಿನ ದಿನವೂ ಆತ ತಸ್ಲಿಮಾ ಜತೆ ಮಾತನಾಡಿದ್ದ ಎಂದು ಆಕೆಯ ಕುಟುಂಬ ಆರೋಪ ಮಾಡಿದೆ.

ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. (ಏಜೆನ್ಸೀಸ್​)