ಚೆನ್ನೈ: ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸಿನಿಮಾ ಗ್ರೂಪ್ ಡಾನ್ಸರ್ ಸೇರಿದಂತೆ ಮೂವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಒಂದೇ ಏರಿಯಾದಲ್ಲಿ ವಾಸವಿದ್ದ ಜಯಸೂರ್ಯ ಎಂಬಾತನ ಜತೆ ಅರುಂಬಕ್ಕಮ್ ಮೂಲದ 14 ವರ್ಷದ ವಿದ್ಯಾರ್ಥಿನಿಗೆ ಪರಿಚಯವಾಗಿತ್ತು. ನಾನು ಸಿನಿಮಾದಲ್ಲಿ ಗ್ರೂಪ್ ಡಾನ್ಸರ್ ಆಗಿದ್ದೇನೆ ಎಂದು ಹೇಳಿ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ಪ್ರೀತಿ ಮಾಡುತ್ತಿರುವುದಾಗಿ ನಂಬಿಸಿದ್ದ. ಪ್ರೀತಿಯ ಹೆಸರಲ್ಲಿ ವಿದ್ಯಾರ್ಥಿನಿಯನ್ನು ಖಾಸಗಿ ಹೋಟೆಲ್ನ ಬಾಡಿಗೆ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.
ಇದೇ ಸಂದರ್ಭದಲ್ಲಿ ಮಗಳು ಕಾಣಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯ ಪಾಲಕರು ಅರುಂಬಕ್ಕಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಶೋಧ ಕಾರ್ಯ ಆರಂಭಿಸಿದಾಗ ಯುವಕರ ಗುಂಪೊಂದು ಹುಡುಗಿಯರನ್ನು ಹೋಟೆಲ್ಗೆ ಕರೆತಂದು ಅವರ ಜೊತೆ ಸಮಯ ಕಳೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ ಎಂಬ ರಹಸ್ಯ ಮಾಹಿತಿ ಪೊಲೀಸರಿಗೆ ದೊರೆಯುತ್ತದೆ.
ಈ ಸುಳಿವನ್ನು ಆಧರಿಸಿ ಹೋಟೆಲ್ ಮೇಲೆ ದಾಳಿ ಮಾಡಿದಾಗ ಸಂತ್ರಸ್ತ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಅದೇ ಕೋಣೆಯಲ್ಲಿದ್ದ ಮೂವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧವೂ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್)