ನ್ಯೂಸ್

ಮಲಬದ್ಧತೆಗೆ ಪುರಾಣ ಚಿಕಿತ್ಸಾ ಪದ್ಧತಿ ಪ್ರಯೋಗ: ಗುದದ್ವಾರದಿಂದ ಈಲ್​ ಮೀನು ತೂರಿಸಿದವನಿಗೆ ಕಾದಿತ್ತು ಶಾಕ್​!

ಬೀಜಿಂಗ್​: ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಮಂದಿ ಇರ್ತಾರೆ ಅನ್ನೋದಕ್ಕೆ ಚೀನಾದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ಮಲಬದ್ಧತೆ ನಿವಾರಿಸಿಕೊಳ್ಳಲು ವೈದ್ಯರ ಮೊರೆ ಹೋಗುವ ಬದಲು ಪುರಾಣ ಪದ್ಧತಿಯ ಮೊರೆ ಹೋದ ಚೀನಾ ವ್ಯಕ್ತಿ, ಇನ್ನೇನು ಸತ್ತೇ ಹೋದ ಅನ್ನುವಷ್ಟರಲ್ಲಿ ಅದೃಷ್ಟವಶಾತ್​ ಬದುಕಿದ್ದಾನೆ.

ಮಲಬದ್ಧತೆ ನಿವಾರಣೆಗಾಗಿ ಆತ ಮಾಡಿದ್ದೇನೆಂದರೆ, ಸುಮಾರು 8 ಇಂಚಿನ ಜೀವಂತ ಈಲ್​ ಮೀನನ್ನು ತನ್ನ ಗುದಾದ್ವಾರದಿಂದ ಒಳಗೆ ತೂರಿಸಿದ್ದಾನೆ. ಇದು ಜಾನಪದ ಅಥವಾ ಪುರಾಣ ಚಿಕಿತ್ಸಾ ಪದ್ಧತಿಗಳಲ್ಲಿ ಒಂದು ಎಂದು ನಂಬಲಾಗಿದೆ. ಕರುಳಿನ ತೊಂದರೆಗಳನ್ನು ನಿವಾರಿಸಿಕೊಳ್ಳಲು ಹಿಂದೆ ಈ ರೀತಿಯ ಪ್ರಯತ್ನ ಮಾಡುತ್ತಿದ್ದರು ಎಂಬ ಮಾಹಿತಿ ಇದೆ.

ಹೆಸರೇಳಲು ಇಚ್ಛಿಸಿದ ರೋಗಿಯ ವಿಚಾರದಲ್ಲಿ ಆಗಿದ್ದೇ ಬೇರೆ. ಗುದದ್ವಾರದಿಂದ ಹೊಟ್ಟೆಯ ಒಳಗೆ ಸೇರಿದ ಈಲ್​, ಕೋಲನ್​ ಮೂಲಕ ನುಸುಳಿ ಕಿಬ್ಬೊಟ್ಟೆಯಲ್ಲಿ ಸಿಲುಕಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಹೊಟ್ಟೆಯಲ್ಲೇ ಜೀವಂತವಾಗಿದ್ದ ಈಲ್​ ಅನ್ನು ಆಪರೇಷನ್​ ಮೂಲಕ ವೈದ್ಯರು ತೆಗೆದಿದ್ದಾರೆ. ಬಳಿಕ ಹಿಮೋಲಿಸಿಸ್‌ನಿಂದ ಸಾವು ಸಂಭವಿಸಬಹುದು ಹುಷಾರಾಗಿರುವಂತೆ ಎಚ್ಚರಿಸಿದ್ದಾರೆ. ಕೆಂಪು ರಕ್ತ ಕಣಗಳು ನಾಶವಾದಾಗ ದೊಡ್ಡ ಕರುಳಿನಿಂದ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು ತಲುಪಿದರೆ ಹಿಮೋಲಿಸಿಸ್​ ಉಂಟಾಗುತ್ತದೆ. ಇನ್ನೊಮ್ಮೆ ಈ ರೀತಿಯ ಹುಚ್ಚು ಪ್ರಯತ್ನಗಳನ್ನು ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಪೂರ್ವ ಚೀನಾದ ಜಿಯಾಂಗ್ಸೂ ಪ್ರಾಂತ್ಯದ ಜಿಂಗ್ಹುವಾದಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗೆಂದು ರೋಗಿ ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರಂಭದಲ್ಲಿ ನಾಚಿಕೆಯಿಂದ ಚಿಕಿತ್ಸೆಯಿಂದ ಹಿಂಜರಿದಿದ್ದ ರೋಗಿ ಕೊನೆಗೆ ನೋವು ತಾಳಲಾರದೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ರೋಗಿ ಪ್ರಯೋಗಿಸಿದ ಜಾನಪದ ಚಿಕಿತ್ಸಾ ಪದ್ಧತಿ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಚೀನಾದಲ್ಲಿ ಈ ರೀತಿಯ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. (ಏಜೆನ್ಸೀಸ್​)