ಚೆನ್ನೈ: ಟವೆಲ್ ಧರಿಸಿ ಅರೆಬೆತ್ತಲೆಯಾಗಿ ಆನ್ಲೈನ್ ಕ್ಲಾಸ್ಗೆ ಹಾಜರಾಗಿದ್ದಲ್ಲದೆ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಶಿಕ್ಷಕನ ವಿರುದ್ಧ ದೂರುಗಳು ಸುರಿಮಳೆ ಆಗುತ್ತಿದ್ದಂತೆ ಆತನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನ್ ಬಂಧಿತ ಶಿಕ್ಷಕ. ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ಕ್ಲಾಸ್ ತೆಗೆದುಕೊಳ್ಳುವ ಈತನ ವಿರುದ್ಧ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳು ಡಜನ್ಗೂ ಅಧಿಕ ದೂರುಗಳನ್ನು ನೀಡಿದ ಬಳಿಕ ಸೋಮವಾರ ರಾತ್ರಿ ಶಿಕ್ಷಕನನ್ನು ಚೆನ್ನೈನ ಅಶೋಕ್ ನಗರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಿಕ್ಷಕನಿಂದ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಆರಂಭವಾಗಿದೆ. ಆರೋಪಿ ಶಿಕ್ಷಕನ ಪತ್ನಿ ಮತ್ತು ತಾಯಿಯನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.
ರಾಜಗೋಪಾಲನ್ ಆರೋಪಿ ಶಿಕ್ಷಕ. ಖಾಸಗಿ ಶಾಲೆಯಲ್ಲಿ ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಈತ ವಿದ್ಯಾರ್ಥಿಗಳ ಮುಂದೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂಬ ಆರೋಪ ಕೇಳಿಬಂದಿತ್ತು. ಸ್ವತಃ ವಿದ್ಯಾರ್ಥಿಗಳೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ, ಶಾಲಾ ಸಿಬ್ಬಂದಿ ಜಾತಿ ಪಕ್ಷಪಾತ ಧೋರಣೆ ಹೊಂದಿದ್ದಾರೆಂಬ ಗಂಭೀರ ಆರೋಪ ಸಹ ಮಾಡಿದ್ದಾರೆ.
ಆರೋಪ ಕೇಳಿಬಂದ ಕೂಡಲೇ ಶಾಲೆಯ ಡೀನ್ ಶಿಕ್ಷಕನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದರು. ಆದರೆ, ಈ ಬಗ್ಗೆ ಅನೇಕ ವಿದ್ಯಾರ್ಥಿಗಳು ಠಾಣೆಗೆ ದೂರು ನೀಡಿದ ಬಳಿಕ ಆತನನ್ನು ಬಂಧಿಸಲಾಗಿದೆ. ಆರೋಪಿ ರಾಜಗೋಪಾಲನ್, ಭೌತಿಕ ತರಗತಿಯಲ್ಲೂ ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು ಮತ್ತು ಅನುಚಿತವಾಗಿಯು ಸ್ಪರ್ಶಿಸುತ್ತಿದ್ದರು. ಇಷ್ಟೇ ಅಲ್ಲದೆ, ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ದೇಹದ ಆಕಾರದ ಬಗ್ಗೆ ಮಾತನಾಡುತ್ತಿದ್ದ ರಾಜ್ಗೋಪಾಲನ್, ಮಹಿಳೆಯರ ಸ್ಲೀವ್ಲೆಸ್ ಉಡುಗೆ ಅಥವಾ ಅಸಾಂಪ್ರದಾಯಿಕ ಬಟ್ಟೆಗಳ ಬಗ್ಗೆ ಅಣುಕಿಸುತ್ತಿದ್ದರೆಂದು ದೂರಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಬರೀ ಟವಲ್ನಲ್ಲಿ ಮಾತ್ರ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯರ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋ ಬಗ್ಗೆ ಕಾಮೆಂಟ್ ಮಾಡುತ್ತಿದ್ದರಂತೆ. ಕೆಲವರಿಗೆ ತುಂಬಾ ಚೆನ್ನಾಗಿದ್ದೀಯಾ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರಿಗೆ ತಲೆಕೆಟ್ಟ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರಂತೆ. ಇಷ್ಟೇ ಅಲ್ಲದೆ, ನನ್ನೊಂದಿಗೆ ಸಿನಿಮಾ ಬನ್ನಿ ಅಂತಲೂ ವಿದ್ಯಾರ್ಥಿನಿಯರನ್ನು ಆರೋಪಿ ಶಿಕ್ಷಕ ಕರೆಯುತ್ತಿದ್ದನಂತೆ.
ಈ ಬಗ್ಗೆ ಶಾಲೆಯ ಮ್ಯಾನೇಜ್ಮೆಂಟ್ ಅನೇಕ ಬಾರಿ ದೂರು ಸಹ ನೀಡಲಾಗಿದೆ. ಆದರೆ, ಈವರೆಗೂ ಒಮ್ಮೆಯು ಕ್ರಮ ತೆಗೆದುಕೊಂಡಿರಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. (ಏಜೆನ್ಸೀಸ್)