ಪಟನಾ: ಉದ್ಯೋಗ ಪಡೆಯಲು ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪಕ್ಷದ ಇಬ್ಬರು ಹಿರಿಯ ನಾಯಕರ ನಿವಾಸಗಳ ಮೇಲೆ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಇಂದು (ಆ.24) ದಾಳಿ ಮಾಡಿದೆ.
ಯುಪಿಎ-1 ಸರ್ಕಾರದಲ್ಲಿ ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿತ್ತು. ಭೂಮಿಗೆ ಪ್ರತಿಯಾಗಿ ಅನರ್ಹ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡಲಾಯಿತು. ಈ ಸಂಬಂಧ ಈಗಾಗಲೇ ಸಿಬಿಐ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದೆ.
ಎನ್ಡಿಎ ಮೈತ್ರಿಕೂಟದಿಂದ ಹೊರ ಬಂದ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ)ಕ್ಕೆ ಸರ್ಕಾರ ರಚನೆ ಮಾಡಲು ಆರ್ಜೆಡಿ ಬೆಂಬಲ ವ್ಯಕ್ತಪಡಿಸಿದೆ. ಇಂದು ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದು, ಅದಕ್ಕೂ ಮುನ್ನವೇ ಆರ್ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ.
ಆರ್ಜೆಡಿ ರಾಜ್ಯ ಸಭಾ ಸಂಸದ ಅಹ್ಮದ್ ಅಶ್ಫಾಕ್ ಕರೀಂ ಮತ್ತು ಬಿಹಾರದ ವಿಧಾನ ಪರಿಷತ್ತು ಸದಸ್ಯ ಸುನೀಲ್ ಸಿಂಗ್ ಅವರ ನಿವಾಸಗಳ ಮೇಲೆ ಇಂದು ಬೆಳಗ್ಗೆ ಸಿಬಿಐ ದಾಳಿ ನಡೆಸಿದೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆ. ಈ ದಾಳಿಗೆ ಅರ್ಥವೇ ಇಲ್ಲ. ದಾಳಿಯ ಭಯದಿಂದ ನಮ್ಮ ಶಾಸಕರು ಅವರೊಂದಿಗೆ (ಬಿಜೆಪಿ) ಸೇರಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಈ ದಾಳಿ ಮಾಡುತ್ತಿದ್ದಾರೆ ಎಂದು ಸುನೀಲ್ ಸಿಂಗ್ ತಮ್ಮ ಪಟನಾ ನಿವಾಸದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)