ಬೆಂಗಳೂರು: ಭೀಕರ ಕಾರು ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗವನ್ನು ದಾನ ಮಾಡುವ ಮೂಲಕ ಕುಟುಂಸ್ಥರು ಮಾನವೀಯತೆ ಮೆರೆದಿದ್ದಾರೆ.
ಯುವಕ ದೀಪಕ್ (26) ಅಂಗಾಂಗವನ್ನು ದಾನ ಮಾಡಿರುವ ಕುಟುಂಬಸ್ಥರು ಇಬ್ಬರ ಬದುಕಿಗೆ ಆಸರೆಯಾಗಿದ್ದಾರೆ. ಸೆ.25 ರಂದು ನೈಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ನಿಂತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿತ್ತು.
ಭೀಕರ ಅಪಘಾತದಲ್ಲಿ ದೀಪಕ್ ಮೆದುಳಿಗೆ ಬಲವಾದ ಪೆಟ್ಟು ಬಿದ್ದು ನಿಷ್ಕ್ರಿಯಗೊಂಡಿತ್ತು. ಬದುಕುವುದಿಲ್ಲ ಎಂದರಿತ ಕುಟುಂಬಸ್ಥರು, ಸಾವಿನ ನೋವಲ್ಲೂ ದೀಪಕ್ ಅವರ ಕಿಡ್ನಿ, ಕಣ್ಣು ಹಾಗೂ ಚರ್ಮ ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸದ್ಯ ದೀಪಕ್ ಮೃತದೇಹ ಆರ್.ಆರ್.ನಗರದ ಎಸ್.ಎಸ್.ಸ್ಪರ್ಶ್ ಆಸ್ಪತ್ರೆಯಲ್ಲಿದೆ. ಇಂದು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ. (ದಿಗ್ವಿಜಯ ನ್ಯೂಸ್)