ನ್ಯೂಸ್

ಪ್ರತಿ ವಿದ್ಯಾರ್ಥಿಯ ಮನೆ ಬಾಗಿಲಿಗೆ ಶಿಕ್ಷಣ: ಹೇಗಿರಲಿದೆ ವಿತ್ತ ಸಚಿವೆ ಘೋಷಿಸಿದ ಡಿಜಿಟಲ್​ ಯೂನಿವರ್ಸಿಟಿ?

ನವದೆಹಲಿ: ಇಂದು ಬಜೆಟ್​ ಮಂಡಿಸುವ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಡಿಜಿಟಲ್​ ಯೂನಿವರ್ಸಿಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಘೋಷಿಸಿದರು. ಈ ಡಿಜಿಟಲ್​ ಯೂನಿವರ್ಸಿಟಿಯು ದೇಶದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡಲಿದೆ ಎಂದರು.

ವಿಶ್ವದರ್ಜೆಯ ಸಾರ್ವತ್ರಿಕ ಶಿಕ್ಷಣವನ್ನು ವೈಯಕ್ತಿಕ ಕಲಿಕಾ ಅನುಭವದೊಂದಿಗೆ ದೇಶದ ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಪೂರೈಸಲು ಡಿಜಿಟಲ್​ ಯುನಿವರ್ಸಿಟಿಯನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಡಿಜಿಟಲ್​ ಯೂನಿವರ್ಸಿಟಿ ಅಂದರೆ ಏನು?

ನೆಟ್ವರ್ಕ್​ ಹಬ್​ ಮತ್ತು ಸ್ಪೋಕ್ ಮಾಡೆಲ್​ ಆಧಾರದ ಮೇಲೆ ಕೇಂದ್ರ ಸರ್ಕಾರವು ಡಿಜಿಟಲ್​ ಯೂನಿವರ್ಸಿಟಿಯನ್ನು ಸ್ಥಾಪಿಸಲು ಯೋಜಿಸಿದೆ. ಇಲ್ಲಿ ಹಬ್​ ಮತ್ತು ಸ್ಪೋಕ್​ ಮಾಡೆಲ್​ ವಿತರಣಾ ವಿಧಾನವಾಗಿ ಕಾರ್ಯನಿರ್ವಹಿಸಲಿದೆ. ಅಂದ್ರೆ ಕೇಂದ್ರಿಕೃತ ಹಬ್​ನಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ಸ್ಪೋಕ್​ ಸಣ್ಣ ಸಣ್ಣ ಸ್ಥಳಗಳ ಅಂತಿಮ ಬಳಕೆಯವರೆಗೂ ತಲುಪಿಸುತ್ತದೆ.

ಇಲ್ಲಿ "ಹಬ್​" ಎಂಬುದು ದೇಶದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು ಸೂಚಿದರೆ, ಸ್ಪೋಕ್​ ಪ್ರತಿಯೊಬ್ಬ ವೈಯಕ್ತಿಕ ವಿದ್ಯಾರ್ಥಿಗಳನ್ನು ಸೂಚಿಸುತ್ತದೆ. ಹಬ್​ನಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ಡಿಜಿಟಲ್​ ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಲುಪಿಸುವುದು ಡಿಜಿಟಲ್​ ಯೂನಿವರ್ಸಿಟಿಯ ಕರ್ತವ್ಯ ಆಗಿರಲಿದೆ.

ಪ್ರತಿಯೊಂದು ಹಬ್​ಗಳು ಕೂಡ "ಅತ್ಯಾಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪರಿಣತಿಯನ್ನು" ನಿರ್ಮಿಸುವ ನಿರೀಕ್ಷೆಯಿದೆ. ನಿರ್ಮಲಾ ಸೀತಾರಾಮನ್​ ಮಾತಿನ ಪ್ರಕಾರ ಹಬ್​ನಲ್ಲಿ ನೀಡಲಾಗುವ ಜ್ಞಾನವೂ ದೇಶದ ವಿವಿಧ ಭಾಷೆಗಳಲ್ಲಿ ದೊರೆಯಲಿದೆ.

ಐಎಸ್​ಟಿಇ ಗುಣಮಟ್ಟದ ಪ್ರಕಾರವೇ ಡಿಜಿಟಲ್​ ಯೂನಿವರ್ಸಿಟಿ ಸ್ಥಾಪನೆಯಾಗಲಿದೆ. ಐಎಸ್​ಟಿಇ ಮಾನದಂಡಗಳು ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯ ಮಾನದಂಡವನ್ನು ತಿಳಿಸುತ್ತದೆ. (ಏಜೆನ್ಸೀಸ್​)