ನ್ಯೂಸ್

ಅಡ್ರೆಸ್​ ಕೇಳೋ ನೆಪದಲ್ಲಿ ಅನುಚಿತ ವರ್ತನೆ: ದಿಟ್ಟ ಯುವತಿಯ ನಡೆಗೆ ಭಾರೀ ಮೆಚ್ಚುಗೆ..!

ಗುವಾಹಟಿ: ಸಾರ್ವಜನಿಕ ಪ್ರದೇಶದಲ್ಲಿ ಹಾಡಹಗಲಲ್ಲೇ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಯುವತಿಯೊಬ್ಬಳ ಸರಿಯಾಗಿ ಕ್ಲಾಸ್​ ತೆಗೆದುಕೊಂಡ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಸಂತ್ರಸ್ತ ಯುವತಿಯು ತನ್ನ ಫೇಸ್​ಬುಕ್​ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾಳೆ.

ಯುವತಿಯನ್ನು ಭಾವನಾ ಕಶ್ಯಪ್​ ಎಂದು ಗುರುತಿಸಲಾಗಿದೆ. ಆಕೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡ ಸಂದೇಶ ಈ ಕೆಳಕಂಡಂತಿದೆ.

ಈ ವ್ಯಕ್ತಿಯ ಹೆಸರು ಮಧುಸನಾ ರಾಜ್​ಕುಮಾರ್​. ಈತ ಪಂಜಬಾರಿ ನಿವಾಸಿ. ನಾನು ನಡೆದುಕೊಂಡು ಬರುವಾಗ ಎದುರುಗಡೆಯಿಂದ ಸ್ಕೂಟಿಯಲ್ಲಿ ಬಂದ ಈತ ವಿಳಾಸ ಕೇಳಲು ಗಾಡಿ ನಿಲ್ಲಿಸಿದ. ಆತ ಹೇಳಿದ್ದ ನನಗೆ ಕೇಳಿಸಲಿಲ್ಲ. ಬಳಿಕ ನನ್ನ ಹತ್ತಿರ ಬಂದು ಸಿನಾಕಿ ಪಾತ್​ ಎಲ್ಲಿ ಬರುತ್ತದೆ ಎಂದು ಕೇಳಿದ. ಆದರೆ, ಆ ವಿಳಾಸ ನನಗೂ ತಿಳಿದಿರಲಿಲ್ಲ ಬಹಳ ಸೌಜನ್ಯದಿಂದಲೇ ಮುಂದೆ ಯಾರನ್ನಾದರೂ ಕೇಳಿ ಎಂದೆ.

ಇದಾದ ಬಳಿಕ ಇದ್ದಕ್ಕಿದ್ದಂತೆ ಎಲ್ಲೆಲ್ಲೋ ಮುಟ್ಟಲು ಆರಂಭಿಸಿದ. ಅನುಚಿತವಾಗಿ ವರ್ತಿಸಿದ. ನಿಜಕ್ಕೂ ನನಗೆ ಆಘಾತವಾಯಿತು ಎಂದಿರುವ ಭಾವನಾ ಆ ಕ್ಷಣದಲ್ಲಿ ಭಯಗೊಳ್ಳದೇ ಆರೋಪಿಯ ಸ್ಕೂಟಿಯ ಹಿಂಬದಿ ಚಕ್ರವನ್ನು ಹಿಡಿದು ಪಕ್ಕದಲ್ಲೇ ಇದ್ದ ಚರಂಡಿಯ ಒಳಗೆ ನೂಕಿದ್ದಾಳೆ. ಇದರಿಂದ ಸ್ಕೂಟರ್​ ಸಂಪೂರ್ಣ ಚರಂಡಿಯಲ್ಲಿ ಸಿಕ್ಕಿಕೊಂಡಿದೆ. ಬಳಿಕ ಆತನೊಂದಿಗೆ ತೀವ್ರ ವಾಗ್ವಾದಕ್ಕೆ ಇಳಿದಿದ್ದಾಳೆ.

ದಿಢೀರ್​ ಲೈಂಗಿಕ ಕಿರುಕುಳ ನನ್ನ ದೇಹದಲ್ಲಿ ಅತೀವಮ ಕೋಪವನ್ನು ಉಂಟು ಮಾಡಿತು. ಒಂದು ಕ್ಷಣವನ್ನೂ ಯೋಚಿಸದೇ ಆತನ ಸ್ಕೂಟಿಯನ್ನು ಹಿಡಿದು ಚರಂಡಿಗೆ ನೂಕಿದೆ. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಅನೇಕರು ನಿಂತು ಏನಾಯಿತು ಎಂದು ಕೇಳಿದರು. ಅವರಿಗೆ ಎಲ್ಲವನ್ನು ಹೇಳಿದ ಬಳಿಕ ಆತನನ್ನು ನಿಂದಿಸಿದರು. ಎಲ್ಲರೂ ನಿನ್ನ ಮುಖ ನೋಡಲಿ ಮಾಸ್ಕ್​ ತೆಗೆ ಎಂದು ಆತನನ್ನು ಛೇಡಿಸಿದರು. ಬಳಿಕ ಚರಂಡಿಯಿಂದ ಸ್ಕೂಟರ್​ನನ್ನು ಹೊರತೆಗೆಯಲು ಜನರ ನೆರವು ಕೋರಿದನು. ಆದರೆ, ಯಾರೊಬ್ಬರು ಆತನ ನೆರವಿಗೆ ಬರಲಿಲ್ಲ ಎಂದು ಭಾವನ ಬರೆದುಕೊಂಡಿದ್ದಾರೆ.

ಇನ್ನೂ ಭಾವನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಲೈಂಗಿಕ ಕಿರುಕುಳದಂತಹ ಅನೇಕ ಘಟನೆಗಳು ವರದಿಯಾಗುತ್ತಿದ್ದು, ಭಾವನಾ ರೀತಿಯಲ್ಲೇ ಎದುರಿಸಿದರೇ ಕಾಮುಕರ ಎದೆಯಲ್ಲಿ ಭಯ ಉಂಟಾಗಬಹುದು ಎಂದು ಅಭಿಪ್ರಾಯ ವ್ಯಕ್ತಡಿಸಿದ್ದಾರೆ. (ಏಜೆನ್ಸೀಸ್​)