ಲಖನೌ: ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆ ತೆರೆಬಿದ್ದಿದೆ. ಗೋರಖ್ಪುರ್ (ನಗರ ಕ್ಷೇತ್ರ) ವಿಧಾನಸಭಾ ಕ್ಷೇತ್ರದಿಂದ ಸಿಎಂ ಯೋಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಬಿಡುಗಡೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಿಎಂ ಯೋಗಿ ಸ್ಪರ್ಧಿಸುವ ಕ್ಷೇತ್ರ ಬಹಿರಂಗವಾಗಿದೆ. ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಮೊದಲ ಹಂತದ 58 ಸ್ಥಾನಗಳಿಗೆ 57 ಅಭ್ಯರ್ಥಿಗಳ ಪಟ್ಟಿ ಮತ್ತು ಎರಡನೇ ಹಂತದ 55 ಸ್ಥಾನಗಳಿಗೆ 38 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಪ್ರಯಾಗರಾಜ್ ಜಿಲ್ಲೆಯ ಸಿರಾಥು ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.
ಉತ್ತರಪ್ರದೇಶದಲ್ಲಿ ಫೆ.10ರಿಂದ ಮಾ. 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜ. 15ರ ವರೆಗೂ ರಾಜಕೀಯ ಪಕ್ಷಗಳಿಗೆ ಭೌತಿಕ ಪ್ರಚಾರ, ರೋಡ್‌ಶೋಗಳಿಗೆ ಅವಕಾಶ ಇರುವುದಿಲ್ಲ. ನಂತರ ಆ ಸಮಯದ ಪರಿಸ್ಥಿತಿಗೆ ಅನುಗಣವಾಗಿ ಹೊಸ ಸೂಚನೆಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. (ಏಜೆನ್ಸೀಸ್)