ಪಟನಾ: ಭಯೋತ್ಪಾದಕ ಘಟಕವನ್ನು ಪತ್ತೆ ಹಚ್ಚಿದ ಸಂಬಂಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಉ್ರಗರ ಕಾರ್ಯ ವಿಧಾನವನ್ನು ವಿವರಿಸುವಾಗ ಬಿಜೆಪಿಯ ಸೈದ್ಧಾಂತಿಕ ಗುರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ವನ್ನು ಉದಾಹರಣೆಯಾಗಿ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಪೊಲೀಸ್ ಅಧಿಕಾರಿ ಗುರಿಯಾದರು.
ಲಾಠಿ ಬಳಕೆಗೆ ಯುವಕರಿಗೆ ತರಬೇತಿ ನೀಡಲು ಇರುವ ಆರ್ಎಸ್ಎಸ್ ಶಾಖೆಯಂತೆ ಪಿಎಫ್ಐ ಸಂಘಟನೆ ದೈಹಿಕ ಶಿಕ್ಷಣದ ಸೋಗಿನಲ್ಲಿ ಯುವಕರನ್ನು ತಮ್ಮ ಕೇಂದ್ರಗಳಿಗೆ ಕರೆಸಿಕೊಂಡು ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು ಮತ್ತು ಯುವಕರ ಬ್ರೈನ್ವಾಷ್ ಮಾಡುತ್ತಿದ್ದರು ಎಂದು ಬಿಹಾರ ರಾಜಧಾನಿ ಪಟನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾನವ್ಜೀತ್ ಸಿಂಗ್ ಧಿಲ್ಲಾನ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಅದನ್ನು ಖಂಡಿಸಿದ್ದಾರೆ. ಅಲ್ಲದೆ, ಧಿಲ್ಲಾನ್ ಅವರಿಂದ 48 ಗಂಟೆಯೊಳಗೆ ಅವರ ಹೇಳಿಕೆಗೆ ವಿವರಣೆ ಪಡೆಯಬೇಕೆಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಬಿಹಾರದ ಎಸ್ಎಸ್ಪಿ ಧಿಲ್ಲಾನ್ ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು ಕ್ಷಮೆಯಾಚಿಸಬೇಕೆಂದು ರಾಜ್ಯಸಭಾ ಸದಸ್ಯ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಸುಶೀಲ್ ಮೋದಿ ಆಗ್ರಹಿಸಿದ್ದಾರೆ. ಎಸ್ಎಸ್ಪಿ ಅವರು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಇಂತಹ ಹೇಳಿಕೆಗಳು ನಿರೂಪಿಸುತ್ತವೆ. ಆರ್ಎಸ್ಎಸ್ನಂತಹ ರಾಷ್ಟ್ರೀಯ ಸಂಘಟನೆಯನ್ನು ಅದು ಹೇಗೆ ಪಿಎಫ್ಐ ಜೊತೆ ಹೋಲಿಕೆ ಮಾಡುತ್ತೀರಾ? ಎಂದು ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಟೀಕಿಸಿದ್ದಾರೆ.
ನಿನ್ನೆ (ಜುಲೈ 14) ಬಿಹಾರದ ರಾಜಧಾನಿ ಪಟನಾದಲ್ಲಿ ಸಂಶಯಾಸ್ಪದ ಭಯೋತ್ಪಾದಕ ಘಟಕವನ್ನು ಭೇದಿಸಿದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಕಾರ್ಯಾಚರಣೆ ಕುರಿತು ವಿವರಣೆ ನೀಡುವಾಗ ಎಸ್ಎಸ್ಪಿ ಧಿಲ್ಲಾನ್ ಈ ಹೇಳಿಕೆ ನೀಡಿದರು. ಪತ್ತೆಯಾದ ಭಯೋತ್ಪಾದಕ ಘಟಕವು 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಸಂಚು ರೂಪಿಸುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ, ಜುಲೈ 12ರಂದು ಪ್ರಧಾನಿ ಮೋದಿ ಭೇಟಿಯ ವೇಳೆ ಅವರನ್ನು ಹತ್ಯೆ ಮಾಡಲು ಪ್ಲಾನ್ ಮಾಡಿದ್ದರು ಎಂಬ ಭಯಾನಕ ಅಂಶ ಶಂಕಿತ ಉಗ್ರರ ಬಂಧನದ ಬಳಿಕ ಬಯಲಾಗಿದೆ ಈ ಘಟಕಕ್ಕೆ ಪಿಎಫ್ಐ ಲಿಂಕ್ ಇದೆ ಎಂಬುದು ಬಯಲಾಗಿದೆ. ಏಕೆಂದರೆ, ದಾಳಿ ವೇಳೆ 2047ಕ್ಕೆ ‘ಭಾರತವು ಇಸ್ಲಾಮಿಕ್ ಭಾರತದ ಆಡಳಿತ ಕಡೆಗೆ’ ಎಂಬ ಶೀರ್ಷಿಕೆಯುಳ್ಳ ದೋಷಾರೋಪಣೆ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ, 25 ಪಿಎಫ್ಐ ಭಿತ್ತಿಪತ್ರಗಳನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಶಂಕಿತ ಉಗ್ರರಿಬ್ಬರು ಭಾರತದಲ್ಲಿ ದೇಶ ವಿರೋಧಿ ಅಭಿಯಾನ ನಡೆಸಲು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)