ನ್ಯೂಸ್

ಅಪಘಾತದಿಂದ ನಟಿ ಯಶಿಕಾ ಸ್ಥಿತಿ ಗಂಭೀರ: ಸ್ನೇಹಿತೆಯ ಸಾವು, ಕಾರಿನಲ್ಲಿದ್ರು ಇಬ್ಬರು ಯುವಕರು

ಚೆನ್ನೈ: ತಮಿಳು ಬಿಗ್​ಬಾಸ್​ ಖ್ಯಾತಿಯ ನಟಿ ಯಶಿಕಾ ಆನಂದ ಅವರ ಕಾರು ಶನಿವಾರ ಮಧ್ಯರಾತ್ರಿ ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಅವರ ಸ್ನೇಹಿತೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಯಶಿಕಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತವು ತಮಿಳುನಾಡಿನ ಚೆಂಗಲಪಟ್ಟು ಜಿಲ್ಲೆಯ ಮಾಮಲ್ಲಪುರಂ ಬಳಿ ಸಂಭವಿಸಿದೆ. ಮೃತಳನ್ನು ಹೈದರಾಬಾದ್​ ಮೂಲದ ಭವಾನಿ (28) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಇಬ್ಬರು ಯುವಕರು ಸಹ ಇದ್ದರು ಎಂದು ತಿಳಿದುಬಂದಿದೆ. ಯಶಿಕಾ ಮತ್ತು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತವನ್ನು ನೋಡಿದ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಗಾಯಗೊಂಡಿದ್ದವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದೀಗ ಪ್ರಕರಣವನ್ನು ದಾಖಲಿಸಿಕೊಂಡಿರುವ ಮಾಮಲ್ಲಪುರಂ ಪೊಲೀಸರು ಯಶಿಕಾ ಮತ್ತು ಕಾರಿನಲ್ಲಿದ್ದ ಇತರರು ಮಧ್ಯ ಸೇವಿಸಿದ್ದರಾ ಎಂಬ ತನಿಖೆ ಕೈಗೊಂಡಿದ್ದಾರೆ. ಭವಾನಿ ಮೃತದೇಹವನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಯಶಿಕಾ ಅವರು ಪ್ರಸ್ತುತ ಕಾಲಿವುಡ್ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮಾಡೆಲ್​ ಹಾಗೂ ಕಿರುತೆರೆ ಕಲಾವಿದೆಯಾಗಿ 2016ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶಿಕಾ, 2018ರಲ್ಲಿ ತೆರೆಕಂಡ ವಯಸ್ಕರ ಕಾಮಿಡಿ ಸಿನಿಮಾ ಡಾರ್ಕ್​ ರೂಮ್​ ಕ್ರಶ್​ ಮೂಲಕ ಹೆಸರುವಾಸಿಯಾದರು. ಇದರೊಂದಿಗೆ ವಿಜಯ್​ ದೇವರಕೊಂಡ ಅಭಿನಯದ ನೋಟಾ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಿಗ್​ಬಾಸ್​ ಸೀಸನ್​ 3ರಲ್ಲಿ ಸ್ಪರ್ಧಿಸಿದ್ದು ಯಶಿಕಾ ಖ್ಯಾತಿಗೆ ಮತ್ತಷ್ಟು ಬೂಸ್ಟ್​ ಸಿಕ್ಕಿತು. (ಏಜೆನ್ಸೀಸ್​)