ಬೆಂಗಳೂರು: ಸೈಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ಕಲಾವಿದರು ಉಳಿದುಕೊಂಡಿದ್ದ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್ ಮೇಲೆ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಹೋಟೆಲ್ನ ಮ್ಯಾನೇಜರ್ ಹಾಗೂ ಪಾರ್ಟಿ ಆರ್ಗನೈಸರ್ ವಿರುದ್ಧ ಎಫ್ಐರ್ ದಾಖಲಿಸಲಾಗಿದೆ. ಕಳೆದ 12ರಂದು ರಾತ್ರಿ 3 ಗಂಟೆವರೆಗೆ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. ಕಾನೂನಿನ ಪ್ರಕಾರ ಒಂದು ಗಂಟೆಗೆ ಪಾರ್ಟಿ ಮುಗಿಯಬೇಕಿತ್ತು. ಆದರೆ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ನಸುಕಿನ ಜಾವ 3.30ರವರೆಗೂ ಪಾರ್ಟಿ ನಡೆಸಿರುವ ಆರೋಪ ಕೇಳಿಬಂದಿದೆ. 1 ಗಂಟೆಗೆ ಮುಗಿಸಬೇಕೆಂದು ಸೂಚನೆ ನೀಡಿದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದೆ ಪಾರ್ಟಿ ನಡೆಸಿರುವ ಆರೋಪವಿದೆ.
ನಗರದಲ್ಲಿ ನಡೆದಿದ್ದ ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಸ್ಟಾರ್ಗಳು ಈ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಸ್ಟಾರ್ಗಳು ಪಾರ್ಟಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಎರಡು ಬಾರಿ ಅವಧಿ ಮೀರಿ ಪಾರ್ಟಿ ಮಾಡಿದ್ದ ಆರೋಪ ಹೋಟೆಲ್ ಸಿಬ್ಬಂದಿ ಮೇಲಿದೆ. 2 ಬಾರಿಯು ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ, ಈಗ ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಸದ್ಯ ಪ್ರಕರಣ ದಾಖಲಾಗಿದ್ದು, ಪಾರ್ಟಿಯಲ್ಲಿ ಏನಾದರೂ ಅಕ್ರಮ ಚಟುವಟಿಕೆ ನಡೆದಿದೆಯಾ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಳೆಹಾಕುತ್ತಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)