ನ್ಯೂಸ್

ಲವ್​ ಜೊತೆಗೆ ಮದ್ವೆ ಭಾಗ್ಯವನ್ನೂ ಕರುಣಿಸಿದ ಬೆಂಗ್ಳೂರು ಟ್ರಾಫಿಕ್​! ವೈರಲ್​ ಸ್ಟೋರಿಯ ಕೊನೆಯಲ್ಲಿದೆ ರೋಚಕ ಟ್ವಿಸ್ಟ್​

ಬೆಂಗಳೂರು: ರಾಜ್ಯ ರಾಜಧಾನಿಯನ್ನು ಬಹುದಿನಗಳಿಂದ ಕಾಡುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ಟ್ರಾಫಿಕ್​ ಜಾಮ್​. ಹೇಳಿಕೊಳ್ಳಲು ಸಿಲಿಕಾನ್​ ಸಿಟಿಯಾದರೂ, ರಸ್ತೆ ಗುಂಡಿಗಳಿಗೇನು ಇಲ್ಲಿ ಕಡಿಮೆ ಇಲ್ಲ. ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್​ ಕಿರಿಕಿರಿಯನ್ನು ಅನುಭವಿಸಿದ್ದಾರೆ. ಆದರೆ, ಅದೇ ಟ್ರಾಫಿಕ್​ ಜಾಮ್​ ಕೆಲವರಿಗೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಅಂದರೆ ನೀವು ನಂಬುತ್ತೀರಾ? ಈ ಸ್ಟೋರಿಯನ್ನು ಓದಿದ ಮೇಲೆ ನೀವು ನಂಬದೇ ಇರಲಾರಿರಿ.

ಇದು ಬೆಂಗಳೂರು ಟ್ರಾಫಿಕ್​ ಜಾಮ್​ನಿಂದ ಶುರುವಾದ ಲವ್​ ಸ್ಟೋರಿ. ಈ ಸ್ಟೋರಿಯನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಎಲ್ಲ ನೆಗಿಟಿವ್​ನಲ್ಲೂ ಒಂದು ಪಾಸಿಟಿವ್​ ಇದ್ದೇ ಇರುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ ಆಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ರೆಡ್ಡಿಟ್​ ಬಳಕೆದಾರನು ತನ್ನ ಪತ್ನಿಯನ್ನು ಮದುವೆಗೂ ಮುನ್ನಾ ಮೊದಲ ಬಾರಿಗೆ ಸೋನಿ ವರ್ಲ್ಡ್​ ಸಿಗ್ನಲ್​ನಲ್ಲಿ ಭೇಟಿಯಾದರಂತೆ. ಬಳಿಕ ಇಬ್ಬರು ಫ್ರೆಂಡ್ಸ್​ ಆದರಂತೆ. ಒಮ್ಮೆ ಆಕೆಯನ್ನು ಡ್ರಾಪ್​ ಮಾಡಲು ಹೋದಾಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಈಜಿಪುರ ಫ್ಲೈಓವರ್​ನಲ್ಲಿ ಟ್ರಾಫಿಕ್​ ಜಾಮ್​ನಿಂದ ಸಿಲುಕಿಕೊಂಡರಂತೆ. ಆ ಕ್ಷಣದಲ್ಲಿ ಇಬ್ಬರಿಗೂ, ಒಂದೆಡೆ ಕಿರಿಕಿರಿ ಮತ್ತು ಹಸಿವು ಕೂಡ ಇತ್ತಂತೆ. ಜನನಿಬಿಡ ಏರಿಯಾದಿಂದ ಹೇಗಾದರೂ ಆಚೆ ಬರಬೇಕು ಅಂತಾ ಬೇರೆ ದಾರಿ ಆಯ್ದುಕೊಂಡ ಇಬ್ಬರು, ನಂತರ ಒಟ್ಟಿಗೆ ಹೋಟೆಲ್​ ಒಂದಕ್ಕೆ ಊಟಕ್ಕೆ ಹೋದರಂತೆ. ಆ ಕ್ಷಣದಲ್ಲೇ ಇಬ್ಬರ ಲವ್​ ಸ್ಟೋರಿ ಆರಂಭವಾಯಿತು ಎಂದು ಹೇಳಿಕೊಂಡಿದ್ದಾರೆ.

ಮೂರು ವರ್ಷಗಳ ಯಶಸ್ವಿ ಡೇಟಿಂಗ್​ ಮತ್ತು ಮದುವೆ ಆಗಿ 2 ವರ್ಷಗಳು ಕಳೆದಿದ್ದರೂ ಈಜಿಪುರದ 2.5 ಕಿ.ಮೀ ಉದ್ದದ ಫ್ಲೈಓವರ್​ ಕೆಲಸ ಮಾತ್ರ ಇನ್ನು ನಡೆಯುತ್ತಲೇ ಇದೆ ಎನ್ನುವ ಮೂಲಕ ತಮ್ಮ ವೈರಲ್​ ಸ್ಟೋರಿಯ ಕೊನೆಯಲ್ಲಿ ರೋಚಕ ಟ್ವಿಸ್ಟ್​ ನೀಡಿದ್ದಾರೆ. ಇದರು ಸರ್ಕಾರದ ಕಾರ್ಯವೈಖರಿಯನ್ನು ಅಣಕಿಸಿದಂತಿದೆ.

ರೆಡ್ಡಿಟ್​ನಲ್ಲಿ ಬರೆದಿರುವ ಪೋಸ್ಟ್​ನ ಸ್ಕ್ರೀನ್​ಶಾಟ್​ ಅನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು, 4 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದಾರೆ. ನೆಟ್ಟಿಗರು ಭಿನ್ನ ಭಿನ್ನ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇದು ನಿಜಕ್ಕೂ ಟ್ರಾಫಿಕ್​ ಲವ್​ ಸ್ಟೋರಿ ಎಂದಿದ್ದಾರೆ.

ಅಂದಹಾಗೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಭೀಕರ ಸಮಸ್ಯೆಯಾಗಿದ್ದರೂ ಜನ ಅದಕ್ಕೆ ಹೊಂದಿಕೊಂಡಿದ್ದಾರೆ. ನಗರದ ಟ್ರಾಫಿಕ್ ಕುರಿತು ಹಲವಾರು ಆನ್‌ಲೈನ್ ಮೀಮ್‌ಗಳನ್ನು ಮಾಡಲಾಗಿದ್ದು, ಹಲವಾರು ಅವು ವೈರಲ್​ ಸಹ ಆಗಿವೆ. (ಏಜೆನ್ಸೀಸ್​)