ನ್ಯೂಸ್

ಇದೇನು ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಂದುಕೊಂಡಿದ್ದೀರಾ ಡಿಸಿಎಂ? ವಿಪಕ್ಷ ನಾಯಕ ಆರ್​. ಅಶೋಕ ವ್ಯಂಗ್ಯ

ಮೋಹನ್​ ಶೆಟ್ಟಿ

ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮುಡಾ ಗೋಲ್ಮಾಲ್​ ಭಾರೀ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರವನ್ನು ಇತರೆ ಪಕ್ಷದ ನಾಯಕರು ತೀವ್ರ ಟೀಕಿಸಿ, ಖಂಡಿಸುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಸರಣಿ ಭ್ರಷ್ಟಾಚಾರಗಳು ನಡೆದಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ನಾಯಕ ಆರ್​. ಅಶೋಕ ಒತ್ತಾಯಿಸಿದ್ದಾರೆ.

ಇನ್ನು ಡಿಸಿಎಂ ವಿರುದ್ಧವು ಗುಡುಗಿರುವ ಆರ್. ಅಶೋಕ, "ಪರಿಶಿಷ್ಟ ಪಂಗಡಗಳ ಬಾಳು ಬೆಳಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರೆಂಟಿ ಕಾರ್ಡ್ ಪ್ರಿಂಟ್ ಮಾಡಲು ಬಳಕೆಯಾಗಿದೆಯಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ನಿಗಮದ ಹಣವೇನು ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಂದುಕೊಂಡಿದ್ದೀರಾ?" ಎಂದು ವ್ಯಂಗ್ಯವಾಡಿದ್ದಾರೆ.

"ಸಿದ್ದರಾಮಯ್ಯ ತಾವು ಸಾಮಾಜಿಕ ನ್ಯಾಯ ನಮ್ಮ ಕಮಿಟ್ಮೇಂಟ್​ ಅಂತ ಬೊಗಳೆ ಭಾಷಣ ಬಿಡುತ್ತೀರಲ್ಲ, ದಲಿತರ ಹಣ ಹೆಂಡ, ಸಾರಾಯಿ ಖರೀದಿಸಲು, ಸಚಿವರ ಫ್ಲೈಟ್ ಟಿಕೆಟ್ ಬುಕ್ ಮಾಡಲು, ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರೆಂಟಿ ಕಾರ್ಡ್ ಪ್ರಿಂಟ್ ಮಾಡಲು ಬಳಕೆಯಾಗುತ್ತಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ಸೋ ಕಾಲ್ಡ್​ ಕಮಿಟ್ಮೇಂಟ್​ ಎಲ್ಲಿ ಹೋಯಿತು" ಎಂದು ಟೀಕಿಸಿದ್ದಾರೆ.