ಬೆಂಗಳೂರು: 2013ರಲ್ಲಿ ಶುದ್ಧಹಸ್ತರಲ್ಲ ಎಂದು ಡಿ.ಕೆ. ಶಿವಕುಮಾರ್ ಅವರನ್ನೇ ಒಂದು ವರ್ಷ ಸಂಪುಟದಿಂದ ಹೊರಗಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರು ಈಗ ತಮ್ಮ ಎರಡನೇ ಅವಧಿಯಲ್ಲಿ ಭ್ರಷ್ಟಾಚಾರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿರುವ ಒಬ್ಬ ಸಚಿವನ ರಾಜೀನಾಮೆಯನ್ನೂ ಪಡೆಯಲಾಗದಷ್ಟು ದುರ್ಬಲರಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
"ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಪರಿಸ್ಥಿತಿ ಕಂಡರೆ ಅಯ್ಯೋ ಎಂದು ಕನಿಕರ ಮೂಡುತ್ತಿದೆ. ಭ್ರಷ್ಟ ಸಚಿವರಿಂದ ಬ್ಲಾಕ್ ಮೇಲ್ ಮಾಡಿಸಿಕೊಂಡು ಕುರ್ಚಿ ಉಳಿಸಿಕೊಳ್ಳುವಂತಹ ದುರ್ಗತಿ ನಿಮಗೆ ಬರಬಾರದಿತ್ತು. ಕರ್ನಾಟಕದ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ಕುಖ್ಯಾತಿ ಪಡೆದುಕೊಳ್ಳುವ ಬದಲು ರಾಜೀನಾಮೆ ಕೊಟ್ಟು ಗೌರವದಿಂದ ನಿವೃತ್ತರಾಗಿ" ಎಂದಿದ್ದಾರೆ.
ವಾಲ್ಮೀಕಿ ನಿಗಮದ ಅಧಿಕಾರಿ ಪಿ.ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರ ಆಗ್ರಹದ ಬೆನ್ನಲ್ಲೇ ಆರ್. ಅಶೋಕ ಅವರ ಈ ಹೇಳಿಕೆ ಮುನ್ನೆಲೆಗೆ ಬಂದಿದೆ.