ನ್ಯೂಸ್

ಅಕ್ರಮ ಹಣ ವರ್ಗಾವಣೆ ಆರೋಪ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಖ್​ ದೇಶ್​ಮುಖ್​ ಬಂಧನ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಸುಮಾರು 12 ಗಂಟೆಗಳ ವಿಚಾರಣೆ ಬಳಿಕ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ನಾಯಕರಾದ ದೇಶ್​ಮುಖ್​ ವಿರುದ್ಧ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ(ಮನಿ ಲಾಂಡರಿಂಗ್)​ ಆರೋಪದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ವಿಚಾರಣೆಗಾಗಿ ಹಾಜರಾಗಲು ಅವರಿಗೆ ಹಲವು ಸಮನ್ಸ್​ ಜಾರಿಗೊಳಿಸಿದ್ದರೂ ಕೆಲ ದಿನಗಳವರೆಗೆ ಹಾಜರಾಗಿರಲಿಲ್ಲ. ಇದಾದ ಬಳಿಕ ಇಡಿ ಲುಕ್​ ಔಟ್​ ನೋಟೀಸ್​ ಹೊರಡಿಸಿತ್ತು. ಹಲವು ಸಮನ್ಸ್​ಗಳಿಗೆ ದೇಶಮುಖ್​ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗುವುದನ್ನು ತಡೆಯಲು ಇಡಿ ಲುಕ್​ಔಟ್​ ಜಾರಿಮಾಡಿತ್ತು.

ಅನಿಲ್​ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್​ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಪರಮ್​ ಬೀರ್​ ಸಿಂಗ್​ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ದೇಶಮುಖ್ ಅವರು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಪೊಲೀಸರನ್ನು ಬಳಸಿಕೊಂಡು ಪ್ರತಿ ತಿಂಗಳು 100 ಕೋಟಿ ರೂ.ವರೆಗೆ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಬೆನ್ನಲ್ಲೇ ದೇಶ್​ಮುಖ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಂದಿನಿಂದ ತನಿಖೆ ನಡೆಸುತ್ತಿತ್ತು. ನಿನ್ನೆ ವಿಚಾರಣೆಗೆ ಆಗಮಿಸಿದ ದೇಶ್​ಮುಖ್​ರನ್ನು 12 ಗಂಟೆಗಳ ಕಾಲ ವಿಚಾರಣೆಯ ಬಳಿಕ ಇಡಿ ಬಂಧಿಸಿದೆ. (ಏಜೆನ್ಸೀಸ್​)