ನ್ಯೂಸ್

ಸೆಲ್ಫಿ ತೆಗೆದು ಸ್ಟೇಟಸ್​ ಹಾಕಿದ ಯುವತಿ: ಸ್ಟೇಟಸ್​ ನೋಡಿ ಸ್ಥಳಕ್ಕೆ ಬಂದ ಸಹೋದರನಿಗೆ ಕಾದಿತ್ತು ಶಾಕ್​!

ವಯನಾಡು: ನೀರು ತುಂಬಿರುವ ಕಲ್ಲು ಕ್ವಾರಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಯನಾಡು ಜಿಲ್ಲೆಯ ಅಂಬಲವಾಯಲ್ ಗ್ರಾಮದಲ್ಲಿರುವ ವಿಕಾಸ್​ ಕಾಲನಿ ಸಮೀಪವಿರುವ ಕಲ್ಲು ಕ್ವಾರಿಯಲ್ಲಿ ನಡೆದಿದೆ.

ಪ್ರವೀಣಾ (20) ಮೃತ ಯುವತಿ. ಸಾಯುವ ಮುನ್ನ ಕಲ್ಲು ಕ್ವಾರಿಗೆ ತಲುಪಿದ ಪ್ರವೀಣಾ, ಒಂದು ಸೆಲ್ಫಿ ತೆಗೆದುಕೊಂಡು, ಅದನ್ನು ಸ್ಟೇಟಸ್​ ಹಾಕಿಕೊಂಡಿದ್ದಳು. ಸ್ಟೇಟಸ್​ ನೋಡಿ ಪ್ರವೀಣಾಳ ಸಹೋದರ ಅಲ್ಲಿಗೆ ಬಂದಾಗ, ಆಕೆ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಹಾರಿದ್ದಾಳೆ. ತಕ್ಷಣ ಆಕೆಯ ಸಹೋದರನು ಸಹ ಜಿಗಿದಿದ್ದಾನೆ. ಆದರೆ, ಆತನಿಗೆ ಈಜು ಗೊತ್ತಿರದ ಕಾರಣ ಸಹೋದರಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ.

ಪ್ರವೀಣಾಳ ಸಹೋದರನ್ನು ನೋಡಿದ ಸ್ಥಳೀಯರು ತಕ್ಷಣ ಕ್ವಾರಿ ಒಳಗೆ ಹಗ್ಗ ಎಸೆದಿದರು. ಅದನ್ನು ಹಿಡಿದುಕೊಂಡು ಆತ ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ, ಪ್ರವೀಣಾ ದುರಂತವಾಗಿ ಸಾವಿಗೀಡಾಗಿದ್ದು, ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

ಅಂದಹಾಗೆ ಪ್ರವೀಣಾ ಸುಲ್ತಾನ ಬಥೇರಿ ನರ್ಸಿಂಗ್​ ಸ್ಕೂಲ್​ನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಅಲ್ಲಿಯೇ ಇದ್ದ ಆಸ್ಪತ್ರೆಯಲ್ಲಿ ಲ್ಯಾಬ್​ ಟೆಕ್ನಿಷಿಯನ್​ ಆಗಿ ಕೆಲಸ ಮಾಡುತ್ತಿದ್ದಳು. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)