ನ್ಯೂಸ್

ಮಧ್ಯರಾತ್ರಿ ಗರ್ಲ್​ಫ್ರೆಂಡ್ ಬೆಡ್​ರೂಮ್​ ಬಾಗಿಲು ಬಡಿದ ಯುವಕ: ಕದ ತೆರೆದವಳಿಗೆ ಕಾದಿತ್ತು ಶಾಕ್​..!

ಹೈದರಾಬಾದ್​: ಮಧ್ಯರಾತ್ರಿ ಗರ್ಲ್​ಫ್ರೆಂಡ್​ ಬೆಡ್​ರೂಮ್​ಗೆ ನುಗ್ಗಿದ ಯುವಕನೊಬ್ಬ ಆಕೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಹೈದರಾಬಾದ್​ನ ಗಾಚಿಬೌಲಿ ಪೊಲೀಸ್​ ಠಾಣಾ ವ್ಯಾಪ್ತಿಯ ವಟ್ಟಿನಗುಪಲ್ಲಿಯಲ್ಲಿ ನಡೆದಿದೆ. ಯುವತಿ ಜೋರಾಗಿ ಕೂಗಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಪಾಲಕರು ಆರೋಪಿ ಯುವಕನನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಬಯಾನಾ ಪ್ರೇಮ್​ ಸಿಂಗ್​ (21) ಜೀಡಿಮೆಟ್ಲ ನಿವಾಸಿ. ಈತ ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿ (ಕೆಪಿಬಿಎಚ್​)ಯ ಎಂಎನ್​ಆರ್​ ಪದವಿ ಕಾಲೇಜಿನ ವಿದ್ಯಾರ್ಥಿ. ರುಖಿ ಸಿಂಗ್​ (21) ಮಧುಫುರ್​ನ ವೆಂಕಟೇಶ್ವರ ಫೈನ್​ ಆರ್ಟ್ಸ್​ ಕಾಲೇಜಿನ ವಿದ್ಯಾರ್ಥಿನಿ. ಇಬ್ಬರು ಸಂಬಂಧಿಕರಾಗಿರುವುದರಿಂದ ಒಬ್ಬರಿಗೊಬ್ಬರು ಪರಿಯಸ್ಥರು.

ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಟ್ಟಿನಗುಲಪಲ್ಲಿಯಲ್ಲಿರುವ ರುಖಿ ಸಿಂಗ್​ ಮನೆಗೆ ತೆರಳಿದ ಪ್ರೇಮ್​ ಸಿಂಗ್​, ಆಕೆಯ ಬೆಡ್​ ರೂಮ್​ ಬಾಗಿಲನ್ನು ಬಡಿಯುತ್ತಾನೆ. ಆಕೆ ಬಾಗಿಲು ತೆಗೆಯುತ್ತಿದ್ದಂತೆ ಆಕೆಯ ಗಂಟಲನ್ನು ಸೀಳಲು ಆರೋಪಿ ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾಗುವ ರುಖಿ ಸಿಂಗ್​ ಜೋರಾಗಿ ಕೂಗುತ್ತಾಳೆ. ತಕ್ಷಣ ಎಚ್ಚರಗೊಳ್ಳುವ ಕುಟುಂಬಸ್ಥರು ಆರೋಪಿಯನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ.

ಇತ್ತ ಚಾಕು ದಾಳಿಯಿಂದ ಗಂಟಲು, ಅಂಗೈ, ಕಾಲು ಮತ್ತು ಮೊಣಕೈನಲ್ಲಿ ಗಾಯಗೊಂಡಿದ್ದ ರುಖಿ ಸಿಂಗ್​ಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ಗಾಚಿಬೌಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರೇಮ್​ ಸಿಂಗ್​ ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. (ಏಜೆನ್ಸೀಸ್​)