ನ್ಯೂಸ್

ಭದ್ರತಾ ಪಡೆಗಳ ಗುಂಡಿನ ದಾಳಿಗೆ ಜೆಇಎಂ ಕಮಾಂಡರ್​ ಸೇರಿದಂತೆ ಐವರು ಉಗ್ರರು ಉಡೀಸ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್​ಕೌಂಟರ್​ನಲ್ಲಿ ಜೈಷ್​ ಇ ಮೊಹಮ್ಮದ್​ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್​ ಸೇರಿದಂತೆ ಐವರು ಉಗ್ರರನ್ನು ಭದ್ರತಾ ಪಡೆಗಳು ಸೆದೆಬಡಿದಿದ್ದಾರೆ.

ಶನಿವಾರ ರಾತ್ರಿ ಪುಲ್ವಾಮಾ ಮತ್ತು ಬುದ್ಗಮ್​ ಜಿಲ್ಲೆಯಲ್ಲಿ ಉಗ್ರ ವಿರೋಧ ಕಾರ್ಯಾಚರಣೆ ನಡೆಸುವಾಗ ನಡೆದ ಎನ್​ಕೌಂಟರ್​ನಲ್ಲಿ ಉಗ್ರರು ಹತರಾಗಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಕೇವಲ 12 ಗಂಟೆಯಲ್ಲಿ ಪಾಕ್​ ಪ್ರಾಯೋಜಕತ್ವದ ಲಷ್ಕರ್​ ಇ ತೊಯ್ಬಾ ಮತ್ತು ಜೈಷ್​ ಇ ಮೊಹಮ್ಮದ್ ಉಗ್ರ ಸಂಘಟನೆಗಳಿಗೆ ಸೇರಿದ ಐವರನ್ನು ಹೊಡೆದುರುಳಿಸಲಾಗಿದೆ. ಮೃತರಲ್ಲಿ ಜೆಇಎಂ ಕಮಾಂಡರ್​ ಉಗ್ರ ಜಾಹೀದ್​ ವಾನಿ ಕೂಡ ಸೇರಿದ್ದು, ಇದೊಂದು ದೊಡ್ಡ ಯಶಸ್ಸು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು 12ಕ್ಕೂ ಅಧಿಕ ಎನ್​ಕೌಂಟರ್​ನಲ್ಲಿ 22 ಉಗ್ರರನ್ನು ಸೆದೆಬಡಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)