More

    ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸಿಹಿಕಹಿ: ರೈತರ ಪ್ರತಿಭಟನೆ ಬಿಸಿ; ಜನಕಲ್ಯಾಣ, ಕಾನೂನು ಸುವ್ಯವಸ್ಥೆ ಬಲ

    ಮೇರಠ್/ಮುಜಾಫರ್​ನಗರ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬಿಜೆಪಿಗೆ ಕೃಷಿಕರ ಪ್ರತಿಭಟನೆ ಬಿಸಿ ತಟ್ಟುವುದು ಬಹುತೇಕ ಖಚಿತವಾಗಿದೆ. ರೈತರ ಬವಣೆ, ನಿರುದ್ಯೋಗ ಸಮಸ್ಯೆಗಳು ಈ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೆ ಕಠಿಣ ಸವಾಲು ಒಡ್ಡಲಿದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಜನಪರ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗಿದೆ ಎಂಬ ಅಭಿಪ್ರಾಯ ಇದೆ. ಹೀಗಾಗಿ ಇದು ಬಿಜೆಪಿ ವರವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

    2017ರ ಚುನಾವಣೆಯಲ್ಲಿ ರಾಜ್ಯದ ಪಶ್ಚಿಮ ಭಾಗದಲ್ಲಿ ಬಹುತೇಕವಾಗಿ ಪ್ರಬಲ ಎದುರಾಳಿ ಇರಲಿಲ್ಲ. ಆದರೆ ಈ ಸಾರಿ ಪರಿಸ್ಥಿತಿ ಹಾಗಿಲ್ಲ. ಸಮಾಜವಾದಿ ಪಕ್ಷ (ಎಸ್​ಪಿ) ಮತ್ತು ರಾಷ್ಟ್ರೀಯ ಲೋಕ ದಳದ (ಆರ್​ಎಲ್​ಡಿ) ಮೈತ್ರಿಕೂಟ ಈ ಭಾಗವನ್ನು ಹೆಚ್ಚು ಕೇಂದ್ರೀಕರಿಸಿದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಟರು ಮತ್ತು ಮುಸ್ಲಿಮರು ಇದ್ದಾರೆ. ಜಾಟರನ್ನು ಬಿಜೆಪಿ ಓಲೈಸುತ್ತಿದ್ದರೆ, ಮುಸ್ಲಿಮರು ಸಾಂಪ್ರದಾಯಿಕವಾಗಿಯೇ ಬಿಜೆಪಿಯೇತರ ಪಕ್ಷಗಳ ಪರ ಇದ್ದಾರೆ. ಹೀಗಾಗಿ ಎಸ್​ಪಿ ಮುಸ್ಲಿಮರ ಮತಗಳನ್ನು ಹೆಚ್ಚು ಭದ್ರ ಮಾಡಿಕೊಳ್ಳುವುದರ ಜತೆಗೆ ಜಾಟ್​ರನ್ನೂ ತನ್ನ ಸೆಳೆಯಲು ಸಕಲ ಪ್ರಯತ್ನ ಮಾಡುತ್ತಿದೆ.

    ಉತ್ತರಾಖಂಡದಲ್ಲಿ ಮಾಜಿ ಸಿಎಂ ಪುತ್ರಿಯರ ಕದನ: ಉತ್ತರಾಖಂಡದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರಿಯರು ಕಣದಲ್ಲಿ ಇದ್ದಾರೆ. ಹಿಂದಿನ ಚುನಾವಣೆಗಳಲ್ಲಿ ತಮ್ಮ ತಂದೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಉಮೇದಿನಿಂದ ಸ್ಪರ್ಧಿಸಿದ್ದಾರೆ. ನಿವೃತ್ತ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಭೂಷಣ್ ಬಿಜೆಪಿ ಅಭ್ಯರ್ಥಿಯಾಗಿ ಕೋಟ್​ದ್ವಾರ್​ದಿಂದ ಮತ್ತು ಮಾಜಿ ಸಿಎಂ ಹರೀಶ್ ರಾವತ್​ರ ಪುತ್ರಿ ಅನುಪಮಾ ರಾವತ್ ಹರಿದ್ವಾರ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಮೂಲಕ ಉಮೇದುವಾರಿಕೆ ಮಾಡಿದ್ದಾರೆ. ಕೋಟ್​ದ್ವಾರ್​ದಿಂದ 2012ರಲ್ಲಿ ಸ್ಪರ್ಧಿಸಿದ್ದ ಖಂಡೂರಿ ಮತ್ತು ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ 2017ರ ಚುನಾವಣೆಯಲ್ಲಿ ಹರೀಶ್ ರಾವತ್ ಪರಾಭವಗೊಂಡಿದ್ದರು. ಇವರಿಬ್ಬರೂ ಸಿಎಂ ಆಗಿದ್ದಾಗಲೇ ಸೋಲುಂಡಿದ್ದರು.

    10 ರೂ.ಗೆ ಥಾಲಿ, ನರೇಗಾ ಮಾದರಿ ಯೋಜನೆ

    ಬಡವರಿಗೆ 10 ರೂಪಾಯಿಗೆ ಊಟ (ಥಾಲಿ), ನಗರ ಪ್ರದೇಶದಲ್ಲಿ ಉದ್ಯೋಗ ಖಾತ್ರಿಗಾಗಿ ನರೇಗಾ ಮಾದರಿಯ ಯೋಜನೆ ರೂಪಿಸಲಾಗುವುದು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗಾಜಿಯಾಬಾದ್​ನಲ್ಲಿ ಭರವಸೆ ನೀಡಿದ್ದಾರೆ. ಮಿತ್ರಪಕ್ಷ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಜತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಣಾಳಿಕೆ ಪ್ರಕಟಿಸುವುದಕ್ಕೂ ಮುನ್ನ ಕೆಲವು ವಿಷಯಗಳನ್ನು ಪಕ್ಷ ಸಾರ್ವಜನಿಕರ ಮುಂದೆ ಮಂಡಿಸಲು ಇಚ್ಛಿಸುತ್ತದೆ. ಗೃಹ ಬಳಕೆಗೆ 300 ಯೂನಿಟ್ ವಿದ್ಯುತ್ ಉಚಿತ, ನೀರಾವರಿಗೆ ಪಂಪ್​ಸೆಟ್​ಗೆ ಉಚಿತ ವಿದ್ಯುತ್, ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್, ವೃದ್ಧರಿಗೆ ಪಿಂಚಣಿ ಯೋಜನೆಗಳನ್ನು ರೂಪಿಸಲಿದೆ ಎಂದರು.

    ಗೋವಾದ 12 ಕ್ಯಾಥೋಲಿಕ್ ಕ್ರೖೆಸ್ತರಿಗೆ ಬಿಜೆಪಿ ಟಿಕೆಟ್

    ಗೋವಾದ ಎಲ್ಲ 40 ಕ್ಷೇತ್ರಗಳಲ್ಲೂ ಬಿಜೆಪಿ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದು, ಈ ಪೈಕಿ 12 ಕ್ಷೇತ್ರದಲ್ಲಿ ಕ್ಯಾಥೋಲಿಕ್ ಕ್ರೖೆಸ್ತ ಸಮುದಾಯದವರಿಗೆ ಟಿಕೆಟ್ ನೀಡಿದೆ. ಶೇ. 30ರಷ್ಟು ಟಿಕೆಟ್ ಕ್ರೖೆಸ್ತರಿಗೆ ನೀಡುವ ಮೂಲಕ ಈ ಸಮುದಾಯವನ್ನು ಸೆಳೆ ಯುವ ಕಾಯತಂತ್ರವನ್ನು ರೂಪಿಸಿದೆ. 2012ರಲ್ಲಿ ಕ್ಯಾಥೋಲಿಕ್ ಪಂಗಡದ ಆರು ಮಂದಿಗೆ ಮತ್ತು 2017ರಲ್ಲಿ ಈ ಪಂಗಡದ ಏಳು ಜನರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇವರೆಲ್ಲರೂ ಗೆದ್ದಿದ್ದರು. ಗೋವಾದಲ್ಲಿ ಶೇ. 25ರಷ್ಟು ಕ್ರಿಶ್ಚಿಯನ್ನರು ಇದ್ದಾರೆ.

    ಸಮಾಜವಾದಿ ಪಕ್ಷ ಗಾಜಿಯಾಬಾದ್​ನಲ್ಲಿ ಹಜ್ ಭವನ ನಿರ್ಮಾಣ ಮಾಡಿದ್ದರೆ, ಬಿಜೆಪಿ ಸರ್ಕಾರ 94 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಲಾಶ ಮಾನಸ ಸರೋವರ ಭವನವನ್ನು ಕಟ್ಟಿದೆ.

    | ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಸಿಎಂ

    ಮೋದಿ ವರ್ಚುವಲ್ ಸಭೆ: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಫೆ.2ರಂದು 11 ಗಂಟೆಗೆ ವರ್ಚುವಲ್ ಮೂಲಕ ಮಾತನಾಡಲಿದ್ದಾರೆ. ಇದು ದೇಶಾದ್ಯಂತ ಪ್ರಸಾರ ಆಗಲಿದೆ. ಕೇಂದ್ರ ಬಜೆಟ್ ಮಂಡನೆಯ ಮಾರನೆ ದಿನ ಈ ಕಾರ್ಯಕ್ರಮ ನಡೆಯುವುದರಿಂದ ಪ್ರಧಾನಿ ಮೋದಿ ಈ ವಿಚಾರವಾಗಿಯೇ ಮಾತನಾಡುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

    ಸಿಧು, ಮಾನ್ ನಾಮಪತ್ರ ಸಲ್ಲಿಕೆ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿರುವ ಸಂಸದ ಭಗವಂತ್ ಮಾನ್ ಧುರಿ ಕ್ಷೇತ್ರದಿಂದ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.

    ವಿಜಯವಾಣಿ ವಿಜಯೋತ್ಸವ ವಿಜೇತರಿಗೆ ಬಹುಮಾನಗಳ ವಿತರಣೆ: ಕಾರು, ಬೈಕ್, ಫ್ರಿಜ್​ ಸೇರಿ ಹಲವು ಉಡುಗೊರೆ

    ಮತ್ತೆ ಬಣ್ಣ ಹಚ್ಚಿದ್ರು ನಟಿ ನೀತೂ ಶೆಟ್ಟಿ; ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts