ಹನುಮಕೊಂಡ: ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಮಾದರಿಯಲ್ಲೇ ಮಹಿಳೆಯೊಬ್ಬಳು ತನ್ನ ಪತಿಯ ಕುತ್ತಿಗೆ ಕೊಯ್ದಿರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. 23 ವರ್ಷದ ಎಂ. ಅರ್ಚನಾ ಎಂಬಾಕೆ ಬ್ಲೇಡ್ನಿಂದ ತನ್ನ ಪತಿಯ ಕುತ್ತಿಗೆ ಕೊಯ್ದಿದ್ದು, ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ.
ಆರೋಪಿ ಅರ್ಚನಾ, ಸ್ಟೋನ್ ಕ್ರಸ್ಸಿಂಗ್ ಘಟಕದ ಸೂಪರ್ವೈಸರ್ ಆಗಿರುವ 26 ವರ್ಷದ ರಾಜು ಎಂಬಾತನ ಜತೆ ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿದ್ದಳು. ನವದಂಪತಿ ದಮೇರಾ ಮಂಡಲದ ಪಸರಗೊಂಡ ಗ್ರಾಮದಲ್ಲಿ ನೆಲೆಸಿದ್ದರು. ಸೋಮವಾರ ರಾತ್ರಿ ಕೋಣೆಯಿಂದ ನರಳಾಡುವ ಶಬ್ದವನ್ನು ರಾಜು ಕುಟುಂಬಸ್ಥರು ಕೇಳಿದ್ದಾರೆ. ಏನೆಂದು ತಿಳಿಯಲು ಓಡಿ ಹೋಗಿ ನೋಡಿದಾಗ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಜು ಅವರನ್ನು ನೋಡಿ, ಗಾಬರಿಗೊಂಡು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ರಾಜುವಿಗೆ ಚಿಕಿತ್ಸೆ ನೀಡಲಾಗಿದೆ. ಕುತ್ತಿಗೆ ಸುತ್ತ ಆರು ಹೊಲಿಗೆ ಹಾಕಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿದ ಬಳಿಕ ಅರ್ಚನಾಳನ್ನು ವಶಕ್ಕೆ ಪಡೆದು ಪೊಲೀಸರು ಗಂಟೆಗಟ್ಟಲೆ ವಿಚಾರಣೆ ನಡೆಸಿದ್ದಾರೆ. ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ತುಂಬಾ ಸಂತೋಷದಿಂದಲೇ ಮದುವೆ ಆದೆ. ಆದರೆ, ನಾನೇನು ಮಾಡಿದೆ ಅಂತಾ ನನಗೆ ತಿಳಿಯುತ್ತಿಲ್ಲ ಎಂದು ಅರ್ಚನಾ ಹೇಳಿಕೆ ನೀಡಿದ್ದಾಳೆ. ಆಕೆಯ ಮಾತು ಕೇಳಿ ಪೊಲೀಸರೇ ಒಮ್ಮೆ ಶಾಕ್ ಆಗಿದ್ದಾರೆ.
ಅರ್ಚನಾ ನೀಡಿದ ಹೇಳಿಕೆಯನ್ನು ಶ್ಯಾಮ್ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಬಿ ಶ್ರೀನಿವಾಸ್ ನಿರಾಕರಿಸಿದ್ದು, ರಾಜು ಅವರನ್ನು ಮದುವೆ ಆಗಲು ಅರ್ಚನಾಗೆ ಇಷ್ಟವಿರಲಿಲ್ಲ. ಹೀಗಾಗಿಯೇ ಆತನ ಮೇಲೆ ಆಕೆ ದಾಳಿ ಮಾಡಿದ್ದಾಳೆ ಎಂದಿದ್ದಾರೆ.
ದ್ವಂದ್ವ ಹೇಳಿಕೆ
ಮದುವೆಯಾದ 20 ದಿನಗಳ ಬಳಿಕ ಅರ್ಚನಾ ಅತ್ತೆ ಮನೆಗೆ ಆಗಮಿಸಿದಳು. ಆರಂಭದಲ್ಲಿ ಇಷ್ಟವಿಲ್ಲದಿದ್ದರೂ ರಾಜು ಅವರನ್ನು ಮದುವೆಯಾದೆ ಎಂದು ಹೇಳಿಕೊಳ್ಳುತ್ತಿದ್ದ ಅಚರ್ನಾ, ಇದೀಗ ವಿಚಾರಣೆ ವೇಳೆ ಮನಸೋಇಚ್ಛೆ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ದ್ವಂದ್ವ ಹೇಳಿಕೆ ನೀಡುತ್ತಿರುವುರಿಂದ ಹೆಚ್ಚಿನ ಮಾಹಿತಿಗಾಗಿ ಕುಟುಂಬಸ್ಥರನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಮಾನಸಿಕ ಅಸ್ವಸ್ಥಳಂತೆ ನಟನೆ
ಘಟನೆ ನಡೆದ ಬೆನ್ನಲ್ಲೇ ರಾಜು ಕುಟುಂಬಸ್ಥರು ಅರ್ಚನಾ ಜತೆ ಮಾತನಾಡಿದ್ದಾರೆ. ಆದರೆ, ಆಕೆ ತಾನು ಮಾನಸಿಕ ಅಸ್ವಸ್ಥಳು ಎಂಬಂತೆ ನಟಿಸಿದಳು ಎಂದು ರಾಜು ಸಹೋದರ ಎಂ. ಶ್ರೀಶೈಲಂ ಹೇಳಿಕೆ ನೀಡಿದ್ದಾರೆ. ಆಕೆ ಅಸ್ವಸ್ಥಳಲ್ಲ. ಕೆಲವು ದಿನಗಳಿಂದ ನಮ್ಮೊಂದಿಗೆ ಇದ್ದಾಗ ಯಾವುದೇ ಸಮಸ್ಯೆ ಕಾಣಿಸಲಿಲ್ಲ ಎಂದು ಹೇಳಿದ್ದಾರೆ.
ವರದಕ್ಷಿಣೆ ಕಿರುಕುಳ ಏನಾದರೂ ಇತ್ತ ಎಂದು ಅರ್ಚನಾ ಸಹೋದರ ಟಿ. ರಾಜು ಕುಮಾರ್ ಬಳಿ ಕೇಳಿದಾಗ, ಆ ರೀತಿಯ ಯಾವುದೇ ಸಮಸ್ಯೆ ಇರಲಿಲ್ಲ ಎಂದಿದ್ದಾರೆ. ಪತಿಯ ಮೇಲೆ ದಾಳಿ ಮಾಡಲು ಕಾರಣವಾದ ಅಂಶದ ಬಗ್ಗೆ ಆಕೆ ನಮಗೆ ಹೇಳುತ್ತಿಲ್ಲ. ಮದುವೆಗೆ ಒಪ್ಪಿದ ಮೇಲೆಯೇ ಆಕೆಯನ್ನು ರಾಜು ಜತೆ ಮದುವೆ ಮಾಡಿಕೊಟ್ಟೆವು ಎಂದು ರಾಜು ಕುಮಾರ್ ತಿಳಿಸಿದ್ದಾರೆ.
ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)