ನ್ಯೂಸ್

ಮೇ 30ರಂದು ನಡದೇ ಹೋಯಿತು ಯಾರೂ ಊಹಿಸದ ಘಟನೆ: 1 ತಿಂಗಳ ಬಳಿಕ ಯುವತಿ ದುರಂತ ಸಾವು

ಪಲಕ್ಕಾಡ್​: ರೇಬೀಸ್​ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಗುರುವಾರ ಕೇರಳದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯ ಹೆಸರು ಶ್ರೀಲಕ್ಷ್ಮಿ (18). ಈಕೆ ಪಲಕ್ಕಾಡ್​ ಮೂಲದ ಸುಗುನನ್​ ಮತ್ತು ಸಿಂಧು ದಂಪತಿಯ ಪುತ್ರಿ. ಮೇ 30ರ ಬೆಳಗ್ಗೆ ಶ್ರೀಲಕ್ಷ್ಮಿ ಕಾಲೇಜಿಗೆ ಹೋಗುವಾಗ ಅವರ ಪಕ್ಕದ ಮನೆಯ ನಾಯಿ ಆಕೆಯೆ ಕಚ್ಚಿತ್ತು. ಇದಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಲಸಿಕೆಯನ್ನು ಶ್ರೀಲಕ್ಷ್ಮಿ ಪಡೆದುಕೊಂಡಿದ್ದಳು.

ಇದರ ನಡುವೆ ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮಿಯನ್ನು ಖಾಸಗಿ ಆಸ್ಪತ್ರೆಗೆ ಕೊರೆದೊಯ್ಯಲಾಯಿತು. ಈ ವೇಳೆ ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳು ಕಂಡುಬಂದಿತು. ತಕ್ಷಣ ಆಕೆಯನ್ನು ತ್ರಿಸ್ಸೂರ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 1) ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ​

ಶ್ರೀಲಕ್ಷ್ಮಿ ಕೊಯಮತ್ತೂರಿನಲ್ಲಿ ಮೊದಲ ವರ್ಷದ ಬಿಸಿಎ ವಿದ್ಯಾರ್ಥಿನಿಯಾಗಿದ್ದಳು. ಈಕೆಗೆ ಸನತ್​ ಮತ್ತು ಸಿದ್ಧಾರ್ಥನ್​ ಹೆಸರಿನ ಇಬ್ಬರು ಸಹೋದರರಿದ್ದಾರೆ. ಕುಟುಂಬಕ್ಕೆ ಒಬ್ಬಳೇ ಹೆಣ್ಣು ಮಗುವಾಗಿದ್ದಳು. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)