ದೇವನಹಳ್ಳಿ: ಯುನೈಟೆಡ್ ಕಿಂಗ್ಡಂ (ಯುಕೆ) ರಾಷ್ಟದಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಆಗಮಿಸುವವರನ್ನು ಕ್ವಾರಂಟೈನ್ನಲ್ಲಿ ಇಟ್ಟು ನಿಗಾ ವಹಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯರಾತ್ರಿ ಆಗಮಿಸುವವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದ್ದಾರೆ.
ಎಲ್ಲರಿಗೂ ಪರೀಕ್ಷೆ: ಯುನೈಟೆಡ್ ಕಿಂಗ್ಡಂನ ವಿವಿಧ ಕಡೆಗಳಲ್ಲಿ ಇದ್ದ 700 ಮಂದಿ ಕನ್ನಡಿಗರು ಆಗಮಿಸುತ್ತಿದ್ದು, ಅವರನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಲಾಗುವುದು. ತಪಾಸಣೆಯಲ್ಲಿ ವೈರಸ್ ಸೋಂಕು ಹರಡಿರುವುದು ದೃಢಪಟ್ಟರೇ ನೇರವಾಗಿ ರಾಜೀವ್ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುವುದು. ಸೋಂಕು ಇಲ್ಲದವರನ್ನು ನಿಗದಿಪಡಿಸಿರುವ ಕ್ವಾರಂಟೈನ್ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕ್ವಾರಂಟೈನ್ ಮುಗಿದ ನಂತರ ಅವರು ತಮ್ಮ ಮನೆಗಳಿಗೆ ತೆರಳಬಹುದು. ದೇವನಹಳ್ಳಿ ಸಮೀಪದಲ್ಲಿರುವ ಹೋಟೆಲ್, ವಸತಿ ಶಾಲೆ, ಕಲ್ಯಾಣ ಮಂಟಪ, ಖಾಸಗಿ,ಸರ್ಕಾರಿ ಆಸ್ಪತ್ರೆಗಳನ್ನು ಕ್ವಾರೆಂಟೈನ್ ಕೇಂದ್ರಗಳಾಗಿ ಮಾರ್ಪಾಡು ಮಾಡಲಾಗಿದೆ.
ಕ್ವಾರಂಟೈನ್ನಲ್ಲಿರುವವರ ನಿಗಾ ವಹಿಸಲು ಜಿಲ್ಲಾಧಿಕಾರಿ 13 ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಉಸ್ತುವಾರಿಯನ್ನು ಜಿಲ್ಲಾಧಿಕಾರಿ ರವೀಂದ್ರ ವಹಿಸಲಿದ್ದಾರೆ.