ಕೇರಳದಲ್ಲಿ ಈಗ ಇರುವ ಆ್ಯಕ್ಟಿವ್ ಕರೊನಾ ವೈರಸ್ ಕೇಸ್​ ಕೇವಲ 30!

Pinarayi Vijayan
Published on

ತಿರುವನಂತಪುರ: ಕೇರಳದಲ್ಲಿ ಇದುವರೆಗಿನ ವರದಿ ಪ್ರಕಾರ, ಪತ್ತೆಯಾದ 502 COVID19 ಕೇಸ್​ಗಳ ಪೈಕಿ ಈಗ ಆ್ಯಕ್ಟಿವ್ ಆಗಿರುವ ಕೇಸ್​ಗಳ ಸಂಖ್ಯೆ ಕೇವಲ 30. ಬುಧವಾರ ಯಾವುದೇ ಪಾಸಿಟಿವ್​ ಕೇಸ್​ಗಳು ದಾಖಲಾಗಿಲ್ಲ. ಆದರೆ ಏಳು ಜನರ ಮಾದರಿಗಳು ನೆಗೆಟಿವ್ ಬಂದಿದೆ. ಅಲ್ಲದೆ, ಪತ್ತನಂತಿಟ್ಟದಲ್ಲಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿ 42 ದಿನಗಳ ಬಳಿಕ ಆ್ಯಕ್ಟಿವ್ ಕೇಸ್ ದೃಢಪಟ್ಟಿರುವುದೇ ಕೊನೆಯ ಆ್ಯಕ್ಟಿವ್ ಕೇಸ್​ ಆಗಿ ದಾಖಲಾಗಿದೆ.

ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ರಾಜ್ಯದಲ್ಲಿ ಎಂಟು ಜಿಲ್ಲೆಗಳು ಈಗಾಗಲೇ ಕೋವಿಡ್ 19 ಮುಕ್ತವಾಗಿವೆ. ಒಟ್ಟು 14,670 ಜನರನ್ನು ಕ್ವಾರಂಟೈನ್​​ನಲ್ಲಿ ಇರಿಸಿದ್ದು, ಈ ಪೈಕಿ 14,402 ಜನ ಮನೆಯಲ್ಲೇ ನಿಗಾದಲ್ಲಿದ್ದಾರೆ. 268 ಜನ ಸೂಚಿತ ಐಸೋಲೇಷನ್​ ಸೌಲಭ್ಯ ಇರುವಲ್ಲಿ ಇದ್ದಾರೆ. ಇದುವರೆಗೆ 34,599 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 34,063 ನೆಗೆಟಿವ್ ಬಂದಿದೆ. ಹೆಚ್ಚುವರಿಯಾಗಿ 2,947 ಸ್ಯಾಂಪಲ್ಸ್​ಗಳನ್ನು ಹೆಲ್ತ್​ ಕೇರ್​ ಸಿಬ್ಬಂದಿಯಿಂದ ಸಂಗ್ರಹಿಸಲಾಗಿದೆ. ಇದಲ್ಲದೆ, ಚಿಕಿತ್ಸೆ ಪಡೆಯುತ್ತಿರುವ ಏಳು ಕೋವಿಡ್​ 19 ರೋಗಿಗಳ ಫಲಿತಾಂಶ ನೆಗೆಟಿವ್ ಬಂದಿದೆ. ಇವರಲ್ಲಿ ಆರು ಜನ ಕೊಟ್ಟಾಯಂ ಮತ್ತು ಒಬ್ಬರು ಇಡುಕ್ಕಿಯವರು. ಪ್ರಸ್ತುತ 30 ಕೋವಿಡ್​ 19 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಬೇರೆ ಬೇರೆ ರಾಜ್ಯಗಳಲ್ಲಿ ಬಾಕಿಯಾಗಿರುವ ಕೇರಳೀಯರನ್ನು ವಾಪಸ್​ ಕೇರಳಕ್ಕೆ ಕರೆತರಲು ಆಯಾ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ದೆಹಲಿ, ಪಂಜಾಬ್​, ಹಿಮಾಚಲ ಪ್ರದೇಶ, ಹರಿಯಾಣಗಳಲ್ಲಿ ಕೇರಳದ 723 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅವರನ್ನು ಕಳುಹಿಸಲು ಆಯಾ ರಾಜ್ಯ ಸರ್ಕಾರಗಳಿಗೆ ವಾಹನದ ವ್ಯವಸ್ಥೆ ಮಾಡಿ ಕೊಡುವಂತೆ ಕೇಳಲಾಗಿದೆ. ವಿಶೇಷ ರೈಲು ಒದಗಿಸಿದರೆ ಉತ್ತಮ ಎಂದು ಹೇಳಿರುವುದಾಗಿ ಸಿಎಂ ಪಿಣರಾಯಿ ಹೇಳಿದರು.

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ 6,802 ಕೇರಳೀಯರು ಸಿಲುಕಿಕೊಂಡಿದ್ದರು. ಅವರೆಲ್ಲರೂ ಈಗ ಕೇರಳ ತಲುಪಿದ್ದು ಈ ಪೈಕಿ 66 ಗರ್ಭಿಣಿಯರೂ ಇದ್ದಾರೆ. ವಯಲಾರ್​ ಗಡಿಯಲ್ಲಿ ಹೆಚ್ಚಿನ ಜನದಟ್ಟಣೆ ಕಾಣಿಸಿದ್ದು, ಮರಳಿ ಊರಿಗೆ ತಲುಪುವ ಸಂಭ್ರಮ ಅಲ್ಲಿ ಕಾಣಿಸಿಕೊಂಡಿದೆ ಎಂದು ಪಿಣರಾಯಿ ವಿಜಯ್​ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net