More

    ಅರಕಲಗೂಡು ಸುತ್ತಮುತ್ತ ಒಂದು ತಾಸು ಭರ್ಜರಿ ಮಳೆ

    ಅರಕಲಗೂಡು: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಸಂಜೆ ಒಂದು ಗಂಟೆ ಭರ್ಜರಿ ಮಳೆಯಾಗಿದ್ದು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ತಂಪೆರೆಯಿತು.

    ಉತ್ತಮ ಮಳೆಯಾಗಿರುವುದು ಕೃಷಿಕರ ಮೊಗದಲ್ಲಿ ಸಂತಸ ಮೂಡಿಸಿದೆ. ಇತ್ತೀಚೆಗೆ ಬಿದ್ದಿದ್ದ ಒಂದೆರಡು ಹದ ಮಳೆಯಿಂದ ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದು ಮುಂಗಾರು ಹಂಗಾಮಿಗೆ ಭೂಮಿಯನ್ನು ಹದಗೊಳಿಸುವ ಕಾರ್ಯ ನಡೆಸಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ನಾಟಿ ಕಾರ್ಯ ಚುರುಕುಗೊಂಡಿದ್ದು, ಈವರೆಗೆ 750 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ರಾಮನಾಥಪುರ ತಂಬಾಕು ಮಾರುಕಟ್ಟೆ ವ್ಯಾಪ್ತಿಗೆ ಸೇರಿದ ಕೊಣನೂರು, ದೊಡ್ಡಮಗ್ಗೆ, ರಾಮನಾಥಪುರ, ಹಳ್ಳಿಮೈಸೂರು ಹೋಬಳಿ ಭಾಗದಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಈಗಾಗಲೇ ನಾಟಿ ಕಾರ್ಯ ನಡೆಸಿದ್ದಾರೆ.
    ಮಳೆಯಾಶ್ರಿತ ಪ್ರದೇಶದ ರೈತರು ಈ ಬಾರಿ ಮುಂಗಾರು ಪೂರ್ವ ಮಳೆ ತಡವಾದ ಕಾರಣ ಇನ್ನೂ ಜಮೀನು ಹದಗೊಳಿಸಲು ಸಾಧ್ಯವಾಗಿರಲಿಲ್ಲ.

    ಕಳೆದ ವಾರ ಬಿದ್ದ ಮಳೆಗೆ ಜಮೀನುಗಳಿಗೆ ಸಾಗಿಸಿದ್ದ ಗೊಬ್ಬರ ಎರಚಿ ಉಳುಮೆ ಮಾಡಿ ಕೆಲವು ರೈತರು ಭೂಮಿ ಹದಗೊಳಿಸಿದ್ದರು. ಇದೀಗ ಬಿದ್ದ ಮಳೆಗೆ ನಾಟಿ ಕಾರ್ಯ ಆರಂಭಿಸಿದ್ದಾರೆ. ಹೊಗೆಸೊಪ್ಪಿಗೆ ಉತ್ತಮ ಬೆಲೆ ದೊರಕಿದ ಹಿನ್ನೆಲೆಯಲ್ಲಿ ಹಾಗೂ ಪ್ರಸ್ತುತ ಆಂಧ್ರಪ್ರದೇಶದ ಮಾರುಕಟ್ಟೆಗಳಿಗೆ ತಂಬಾಕಿಗೆ ಬೆಲೆ ಗರಿಷ್ಠ ಮಟ್ಟ ತಲುಪಿರುವುದರಿಂದ ಈ ಭಾಗದ ಬೆಳೆಗಾರರು ಬೆಳೆ ಬೆಳೆಯಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬೆಳೆಸಿದ್ದ ಸಸಿ ಮಡಿಗಳನ್ನು ಮಳೆ ಕೊರತೆ ನಡುವೆಯೂ ಟ್ರೇನಲ್ಲಿ ಬೆಳೆಸಿ ರಕ್ಷಣೆ ಮಾಡಿಕೊಂಡಿದ್ದರು. ಈಗ ಬಿದ್ದ ಮಳೆ ನಾಟಿ ಕಾರ್ಯ ನಡೆಸಲು ವರದಾನವಾಗಿದ್ದು ಬೆಳೆಗಾರರ ಸಂತಸ ಇಮ್ಮಡಿಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts