More

    ಮಳೆಗಾಗಿ ಎದುರು ನೋಡುತ್ತಿರುವ ರೈತರು

    ಗುಂಡ್ಲುಪೇಟೆ: ಪ್ರತಿ ವರ್ಷ ಏಪ್ರಿಲ್ ವೇಳೆಗೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪೂರ್ವ ಮುಂಗಾರಿನಿಂದ ತಾಲೂಕಿನಾದ್ಯಂತ ಮೊದಲ ಮಳೆಯಾಗುತ್ತಿತ್ತು. ಅಂತೆಯೇ ಈ ಬಾರಿಯೂ ತಾಲೂಕಿನ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

    ಯುಗಾದಿ ಹಬ್ಬದ ಸಂದರ್ಭದಲ್ಲಿ ಬೀಳುವ ಮಳೆಗೆ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಹಬ್ಬಕ್ಕೂ ಮೊದಲೇ ಕೃಷಿ ಚಟುವಟಿಕೆಗಳು ಗರಿಗೆದರಿದೆ. ರೈತರು ಜಮೀನುಗಳಿಗೆ ಗೊಬ್ಬರ, ಕೆರೆಗಳ ಮೆಕ್ಕಲು ಮಣ್ಣು ಹೂಡಿ ಮೇಲಿಂದ ಮೇಲೆ ಉಳುಮೆ ಮಾಡಿ ಭೂಮಿಯನ್ನು ಹದಗೊಳಿಸಿ ಮೊದಲನೇ ಮಳೆ ಬೀಳುತ್ತಿದ್ದಂತೆ ಬಿತ್ತನೆ ಆರಂಭಿಸುವುದು ವಾಡಿಕೆ. ಆದರೆ ಈ ಬಾರಿ ಯುಗಾದಿ ಕಳೆದು ವಾರವಾದರೂ ಮಳೆ ಬೀಳದಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದರೂ ಏ.18ರಂದು ತಾಲೂಕಿನ ಹಂಗಳ, ಗೋಪಾಲಪುರ, ಹಸಗೂಲಿ, ಮಂಗಲ, ಕುಂದಕೆರೆ ಸೇರಿದಂತೆ ಕೆಲವು ಗ್ರಾಮದಲ್ಲಿ ಸಣ್ಣದಾಗಿ ಮಳೆ ಬಿದ್ದಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.

    ಕಳೆದ ವರ್ಷ ಸಕಾಲದಲ್ಲಿ ಮತ್ತು ಸಮರ್ಪಕ ಪ್ರಮಾಣದಲ್ಲಿ ಮಳೆ ಬೀಳದೆ ಎಲ್ಲ ಬೆಳೆಗಳೂ ಕೈಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಯಾವುದೇ ಬೆಳೆ ಕೈಸೇರದ ಪರಿಣಾಮ ಆಹಾರ ಧಾನ್ಯ ಹಾಗೂ ಜಾನುವಾರುಗಳ ಮೇವಿಗೆ ಕೊರತೆಯಾಗಿದೆ. ಮಾರುಕಟ್ಟೆಯಲ್ಲಿ ಎಲ್ಲ ಧಾನ್ಯಗಳ ಬೆಲೆ ಗಗನಕ್ಕೇರಿದ್ದರಿಂದ ಸಾಮಾನ್ಯರು ಬೆಲೆ ಏರಿಕೆಯಿಂದ ಬಸವಳಿದರೆ, ಹೈನುಗಾರರು ಮತ್ತು ಜಾನುವಾರು ಮಾಲೀಕರು ಮೇವು ಪೂರೈಸಲು ಪರದಾಡುವಂತಾಗಿದೆ.

    ಈ ಬಾರಿಯಾದರೂ ಸಕಾಲದಲ್ಲಿ ಪೂರ್ವ ಮುಂಗಾರು ಬಿದ್ದರೆ ರೈತರು ಬಿತ್ತನೆ ಮಾಡಲು ಸಾಧ್ಯ. ನಂತರ ಬರುವ ಮಳೆ ಮತ್ತು ಹಿಂಗಾರಿನಿಂದ ಎಲ್ಲ ಫಸಲುಗಳೂ ಕೈಸೇರುತ್ತವೆ ಎಂಬ ಆಶಾಭಾವನೆಯಿಂದ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಸ್ವಂತ ಏರು ಹೊಂದಿರುವ ರೈತರು ಜಮೀನನ್ನು ಉಳುವ ಮೂಲಕ ಮತ್ತಷ್ಟು ಹದಗೊಳಿಸುತ್ತಿದ್ದಾರೆ.

    ಮಳೆಬಿದ್ದ ಕೂಡಲೇ ರೈತರು ಸೂರ್ಯಕಾಂತಿ, ಮುಸುಕಿನಜೋಳ, ಹತ್ತಿ ಹಾಗೂ ಜೋಳದ ಬಿತ್ತನೆ ಮಾಡುವುದರಿಂದ ಕೃಷಿ ಇಲಾಖೆ ಈಗಾಗಲೇ ಪಟ್ಟಣದ ಕೃಷಿ ಕಚೇರಿ ಹಾಗೂ ತಾಲೂಕಿನ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲು ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.

    ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ರೈತರ ಬದುಕು ದುಸ್ತರವಾಗಿದೆ. ಈ ಬಾರಿ ರೈತರು ಮಳೆಬಿದ್ದ ಕೂಡಲೇ ಬಿತ್ತನೆ ಕಾರ್ಯ ಕೈಗೊಳ್ಳಲು ಸಿದ್ಧವಾಗಿದ್ದಾರೆ. ಗುರುವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂತುರು ಮಳೆಯಾಗಿದ್ದು, ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಜೋರು ಮಳೆ ಬಿದ್ದರೆ ಬಿತ್ತನೆ ಕಾರ್ಯ ಆರಂಭಿಸಲಾಗುವುದು.
    ಎಚ್.ಎಂ.ಮಹೇಶ್ ರೈತ, ಹಂಗಳ

    ಈಗಾಗಲೇ ಇಲಾಖೆ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿದ್ದು ರೈತರು ಕೇಳಿದ ಕೂಡಲೇ ವಿತರಣೆ ಮಾಡಲಾಗುವುದು.
    ಕಿರಣ್‌ಕುಮಾರ್, ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts