More

    ರಸ್ತೆ ಏನು ನಿಮ್ಮ ಅಪ್ಪನ ಮನೆ ಆಸ್ತಿಯಾ? ಶಾಸಕ-ಮೇಯರ್​ ದಂಪತಿಗೆ KSRTC ಡ್ರೈವರ್​ ತಾಯಿಯಿಂದ ತರಾಟೆ

    ತಿರುವನಂತಪುರಂ: ದೇಶದ ಅತಿ ಕಿರಿಯ ಮೇಯರ್ ಹಾಗೂ ರಾಜ್ಯದ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಪಾತ್ರರಾಗಿರುವ ಮೇಯರ್​ ಆರ್ಯ ರಾಜೇಂದ್ರನ್​ ಮತ್ತು ಆಕೆಯ ಪತಿ ಸಚಿನ್​ ದೇವ್​ ಕೆಎಸ್​ಆರ್​ಟಿಸಿ ಚಾಲಕನ ಜತೆ ವಾಗ್ವಾದಕ್ಕಿಳಿಯುವ ಮೂಲಕ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಕೆಎಸ್​ಆರ್​ಟಿಸಿ ಬಸ್​ ಅನ್ನು ಆರ್ಯ ರಾಜೇಂದ್ರನ್​ ದಂಪತಿ ತಮ್ಮ ಖಾಸಗಿ ವಾಹನದ ಮೂಲಕ ಓವರ್​ಟೇಕ್​ ಮಾಡುವಾಗ ಬಸ್​ ಚಾಲಕ ಕೆಟ್ಟದಾಗಿ ಸನ್ನೆ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರಕ್ಕೆ ವಾಗ್ವಾದ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ತಿಳಿದುಬಂದಿದೆ.

    ಬಸ್​ ಚಾಲಕ ಯಧು ಅವರನ್ನು ಅಸಭ್ಯ ವರ್ತನೆ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ. ಆದರೆ, ನಂತರದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಯಧು ಕೂಡ ಆರ್ಯ ರಾಜೇಂದ್ರನ್​ ದಂಪತಿ ಮೇಲೆ ದೂರು ದಾಖಲಿಸಿದ್ದು, ತಮ್ಮ ಪ್ರವಾಸವನ್ನು ಪೂರ್ಣಗೊಳಿಸಲು ಬಿಡದೆ ರಸ್ತೆಯನ್ನು ಬ್ಲಾಕ್​ ಮಾಡಿ ತೊಂದರೆ ಕೊಟ್ಟರು ಎಂದು ಆರೋಪಿಸಿದ್ದಾರೆ. ಚಾಲಕನ ವಿರುದ್ಧ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಅವರಿಗೆ ಸೋಮವಾರ ಅಧಿಕೃತ ದೂರು ಸಲ್ಲಿಸುವುದಾಗಿ ಘಟನೆ ನಡೆದ ಬೆನ್ನಲ್ಲೇ ಸಚಿನ್ ದೇವ್ ಹೇಳಿದ್ದರು. ಇತ್ತ ಆರ್ಯ ಅವರು ಪಟ್ಟಂ ಮತ್ತು ಪಾಳಯಂ ನಡುವಿನ ರಸ್ತೆಯ ಉದ್ದಕ್ಕೂ ಇರುವ ಸಿಸಿಟಿವಿ ಕ್ಯಾಮೆರಾಗಳ ಸಂಪೂರ್ಣ ದೃಶ್ಯಗಳನ್ನು ತನಗೆ ನೀಡುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಈ ಘಟನೆಯ ಬಗ್ಗೆ ಮಾತನಾಡಿರುವ ಆರ್ಯ, ಇದು ಬಸ್​ ಅನ್ನು ಓವರ್​ಟೇಕ್​ ಮಾಡುವ ವಿಚಾರ ಮಾತ್ರವಲ್ಲ, ಮಹಿಳೆಯರ ಕಡೆಗೆ ಬಸ್​ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ನನ್ನ ಸೋದರ ಸಂಬಂಧಿಯ ಮದುವೆ ಇತ್ತು. ಸಮಾರಂಭ ಮುಗಿಸಿ ಕುಟುಂಬ ಸಮೇತ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ನಾವು ಅದನ್ನು ನಿರ್ಲಕ್ಷಿಸಿದ್ದೇವೆ. ಆದರೆ ಚಾಲಕ ನಮಗೆ ದಾರಿ ನೀಡಲು ನಿರಾಕರಿಸಿದನು. ಕೊನೆಗೆ ನಾವು ಆತನನ್ನು ಹಿಂದಿಕ್ಕಿ, ಓವರ್​ಟೇಕ್​ ಮಾಡುವಾಗ ಚಾಲಕ ಅಶ್ಲೀಲ ಸನ್ನೆಗಳನ್ನು ಮಾಡುವುದನ್ನು ನಾನು ಮತ್ತು ನನ್ನ ಅತ್ತಿಗೆ ಗಮನಿಸಿದೆವು. ಬಳಿಕ ಚಾಲಕನನ್ನು ಪಾಳಯಂ ಸಫಲ್ಯಂ ಕಾಂಪ್ಲೆಕ್ಸ್‌ನ ಮುಂದೆ ತಡೆದು ನಿಲ್ಲಿಸಿದೆವು ಎಂದು ಆರ್ಯ ತಿಳಿಸಿದ್ದಾರೆ.

    ಈ ವೇಳೆ ಚಾಲಕನ ಪ್ರತಿಕ್ರಿಯೆ ದಿಗಿಲು ಹುಟ್ಟಿಸುವಂತಿತ್ತು. ಚಾಲಕ ನನ್ನ ಹಾಗೂ ನನ್ನ ಸಹೋದರನೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಅವರ ಅಶಿಸ್ತಿನ ವರ್ತನೆಯನ್ನು ಸಾಕ್ಷಿಗಳ ಮೂಲಕ ರುಜುವಾತುಪಡಿಸಬಹುದು. ಹೆಚ್ಚಿನ ದುರ್ನಡತೆಯನ್ನು ಗಮನಿಸಿದ ನಂತರ ನಾನು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಅವರನ್ನು ಸಂಪರ್ಕಿಸಿದೆ. ಜಾಗೃತ ದಳ ಮತ್ತು ಕಂಟೋನ್ಮೆಂಟ್ ಪೊಲೀಸರು ಸ್ಥಳಕ್ಕೆ ಬಂದರು. ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಚಾಲಕ ಕ್ಷಮೆಯಾಚಿಸಿದರೂ, ನಾನು ಅದನ್ನು ಸ್ವೀಕರಿಸಲು ನಿರಾಕರಿಸಿದೆ. ಇದು ನನ್ನ ಬಗ್ಗೆ ಮಾತ್ರವಲ್ಲ, ಮಹಿಳೆಯರು ಅನುಭವಿಸುವ ಅವಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಚಾಲಕ ಯಧು, ಘಟನೆಯ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದರು. ಮೇಯರ್ ಮತ್ತು ಅವರ ಸಹಚರರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರತಿಪಾದಿಸಿದರು. ಯಧು ಪ್ರಕಾರ, ಮೇಯರ್ ವಾಹನವು ಪ್ಲಾಮೂಡ್ ಮತ್ತು ಪಿಎಂಜಿ ನಡುವಿನ ಏಕಮುಖ ರಸ್ತೆಯಲ್ಲಿ ಎಡಭಾಗದಿಂದ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿತು. ತಿರುವನಂತಪುರಂ ಮೇಯರ್ ಮತ್ತು ಎಂಎಲ್ಎ ಎಂಬುದು ಗೊತ್ತಿಲ್ಲದೆ ನಾನು ಅವರೊಂದಿಗೆ ವಾಗ್ವಾದ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.

    ತ್ರಿಶೂರ್-ಆಲಪ್ಪುಳ-ತಿರುವನಂತಪುರ ಮಾರ್ಗದ ಬಸ್ ಇದಾಗಿದೆ. ನಾನು ಈಗಾಗಲೇ ಎರಡು ವಾಹನಗಳಿಗೆ ಓವರ್‌ಟೇಕ್ ಮಾಡಲು ಅವಕಾಶ ನೀಡಿದ್ದೆ. ಮೇಯರ್ ಕಾರು ಮೂರನೆಯದು. ಪ್ಲಾಮೂಡ್ ಮತ್ತು ಪಿಎಂಜಿ ನಡುವಿನ ಏಕಮುಖ ಮಾರ್ಗದಲ್ಲಿ ಕಾರನ್ನು ಓವರ್‌ಟೇಕ್ ಮಾಡಲು ಅವಕಾಶವಿರಲಿಲ್ಲ. ಹೀಗಿದ್ದರೂ, ಕಾರು ಬಸ್ಸಿನ ಮುಂದೆ ನಿಂತಿತು. ನಾನು ಅವರ ಅಗೌರವದ ವರ್ತನೆಗೆ ಪ್ರತಿಕ್ರಿಯಿಸಲಿಲ್ಲ. ಅಲ್ಲಿಯವರೆಗೆ ಅವರು ಯಾರೆಂಬುದು ಸಹ ನನಗೆ ತಿಳಿದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನನ್ನ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಬಹುದು ಎಂದು ಯಧು ಹೇಳಿದ್ದಾರೆ.

    ರಸ್ತೆ ಏನು ನಿಮ್ಮ ಅಪ್ಪನ ಆಸ್ತಿಯಾ?
    ಚಾಲಕ ಯಧು ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಅವರ ತಾಯಿ ಆರ್ಯ ರಾಜೇಂದ್ರನ್​ ದಂಪತಿ ಮೇಲೆ ಸಿಡಿದೆದ್ದಿದ್ದಾರೆ. ತಪ್ಪು ನಡೆದಾಗ ಎರಡೂ ಕಡೆ ಪರಿಶೀಲನೆ ನಡೆಸಬೇಕು. ನನ್ನ ಮಗನಿಗೆ ಮಾತ್ರ ಡಿಂಕ್​ ಅಂಡ್​ ಡ್ರೈವ್​ ತಪಾಸಣೆ ಮಾಡಲಾಗಿದೆ. ಆದರೆ, ಮದುವೆ ಪಾರ್ಟಿಯಿಂದ ಬರುತ್ತಿದ್ದವರನ್ನು ಏಕೆ ಪರಿಶೀಲಿಸಲಿಲ್ಲ? ಮಗನ ದೂರನ್ನು ಸ್ವೀಕರಿಸದೇ ಅವರ ದೂರನ್ನು ಸ್ವೀಕರಿಸಲಾಗಿದೆ. ರಸ್ತೆ ಏನು ಅವರ ಅಪ್ಪನ ಮನೆಯ ಆಸ್ತಿಯಾ? ಒಬ್ಬ ಮೇಯರ್ ಆಗಿ ಈ ರೀತಿ ನಡೆದುಕೊಳ್ಳುತ್ತಾರಾ? ನನ್ನ ಮಗ ಆಲ್ಕೋಹಾಲ್​ ಸೇವಿಸಿದ್ದನ್ನು ನಾನೆಂದು ನೋಡಿಲ್ಲ ಎಂದು ಯಧು ತಾಯಿ ಮಗನನ್ನು ಸಮರ್ಥಿಸಿಕೊಂಡರು.

    ತನಿಖೆ ನಡೆದಿದೆ
    ಈ ಘಟನೆಯಲ್ಲಿ ಮಧ್ಯ ಪ್ರವೇಶ ಮಾಡಿರುವ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್, ತನಿಖೆ ನಡೆಸಲು ಸೂಚಿಸಿದ್ದಾರೆ. ಸದ್ಯ ಪ್ರಯಾಣಿಕರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಚಾಲಕನನ್ನು ಯಾರೂ ದೂರಿಲ್ಲ ಎಂದು ತಿಳಿದುಬಂದಿದೆ. ವಿಜಿಲೆನ್ಸ್ ಅಧಿಕಾರಿಯು ತನಿಖಾ ವರದಿಯನ್ನು ನಿನ್ನೆ ಸಚಿವರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    1971ರಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ಮಹಿಳೆ ಹಸಿದಿದ್ದಾಗ ಬಾಯಿಗೆ ಅನ್ನ ಹಾಕಿ ಅದನ್ನಲ್ಲ… ಭಾರಿ ಸಂಚಲನ ಸೃಷ್ಟಿಸಿದ ನಟಿ ರಶ್ಮಿ ಪೋಸ್ಟ್​

    ಮತದಾನ ಮಾಡುವವರಿಗೆ ಬಂಪರ್​ ಆಫರ್​! ಡೈಮಂಡ್​ ರಿಂಗ್​, ಫ್ರಿಡ್ಜ್​, ಟಿವಿ ಗೆಲ್ಲುವ ಸುವರ್ಣಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts