ನ್ಯೂಸ್

'ಉಗ್ರರು ಮತ್ತೆ ಬಂದರೆ ಅವರನ್ನೂ ಕೊಲ್ಲುತ್ತೇನೆ'; ಅಪ್ಪ-ಅಮ್ಮನನ್ನು ಕೊಂದವರಿಗೆ ಗುಂಡಿಕ್ಕಿದ ಬಾಲಕಿಯ ಖಡಕ್​ ಮಾತು

ಕಣ್ಣೆದುರೇ ತನ್ನ ತಂದೆ-ತಾಯಿಯನ್ನು ಕೊಂದ ತಾಲಿಬಾನಿ ಉಗ್ರರನ್ನು ಎಕೆ 47 ಗನ್​​ನಿಂದ ಗುಂಡಿಕ್ಕಿ ಕೊಂದ ವೀರ ಬಾಲಕಿ ಕಮರ್​ ಗುಲ್​, ಬರೀ ಇವರಿಷ್ಟೇ ಅಲ್ಲ, ಇನ್ಯಾವುದೇ ಉಗ್ರರು ಬಂದು ನಮ್ಮ ಮೇಲೆ ದಾಳಿಗೆ ಯತ್ನಿಸಿದರೂ ಅವರನ್ನೂ ಹೀಗೆ ಕೊಲ್ಲುತ್ತೇನೆ ಎಂದು ಖಡಕ್​ ಹೇಳಿಕೆ ನೀಡಿದ್ದಾಳೆ.

ಕಳೆದ ವಾರ ಅಫ್ಘಾನಿಸ್ತಾನದ ಘೋರ್​ ಪ್ರಾಂತ್ಯದಲ್ಲಿರುವ ಬಾಲಕಿಯ ಮನೆಗೆ ನುಗ್ಗಿದ ಒಂದಷ್ಟು ಉಗ್ರರು, ಸರ್ಕಾರದ ಬೆಂಬಲಿಗರಾಗಿದ್ದ, ಹಳ್ಳಿಯ ಮುಖ್ಯಸ್ಥರಾಗಿದ್ದ ಅವಳ ತಂದೆಯನ್ನು ಹತ್ಯೆ ಮಾಡಿದ್ದರು. ಹಾಗೇ ತಡೆಯಲು ಹೋದ ತಾಯಿಯನ್ನೂ ಕೊಂದಿದ್ದರು. ಆಗ 15 ವರ್ಷದ ಬಾಲಕಿ ಕಮರ್​ ಗುಲ್​, ಮನೆಯೊಳಗೆ ಇದ್ದ ಬಂದೂಕಿನಿಂದ ಉಗ್ರರೆಡೆಗೆ ಗುಂಡು ಹಾರಿಸಿದ್ದರು. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದರು. ಬಾಲಕಿಯ ಸಾಹಸಗಾಥೆ ಭರ್ಜರಿ ಸುದ್ದಿಯಾಗಿತ್ತು. ಆಕೆ ಬಂದೂಕು ಹಿಡಿದುಕೊಂಡಿದ್ದ ಫೋಟೋಗಳೂ ವೈರಲ್ ಆಗಿತ್ತು.

ನಂತರ ಅಂತಾರಾಷ್ಟ್ರೀಯ ಮಾಧ್ಯಮವೊಂದು ಫೋನ್​ ಮೂಲಕ ಅವಳನ್ನು ಸಂದರ್ಶನ ಮಾಡಿದೆ. ಈ ವೇಳೆ ಅಷ್ಟೇ ಧೈರ್ಯದಿಂದ ಮಾತನಾಡಿದ್ದಾಳೆ. ನನಗೆ ಉಗ್ರರೆಂದರೆ ಯಾವುದೇ ಭಯವಿಲ್ಲ. ಅವರ ವಿರುದ್ಧ ಹೋರಾಟ ನಡೆಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಊಟಕ್ಕೆ ಕರೆದ ಅಮ್ಮನ ತಲೆಗೆ ಗುಂಡು ಹೊಡೆದ ಮಗ; ಕಾರಣ ತೀರ ಕ್ಷುಲ್ಲಕ

ಸದ್ಯ ಸಂಬಂಧಿಕರೋರ್ವರ ಮನೆಯಲ್ಲಿರುವ ಕಮರ್​ ಗುಲ್​, ತನ್ನ ತಂದೆ-ತಾಯಿಯ ಹತ್ಯೆ ಆಗಿರುವ ದಿನ ಏನಾಯಿತು ಎಂಬುದನ್ನು ವಿವರಿಸಿದ್ದಾಳೆ. ನಾನು ಅಂದು ನನ್ನ 12 ವರ್ಷದ ಸೋದರನೊಂದಿಗೆ ಒಂದು ಕೋಣೆಯಲ್ಲಿ ಮಲಗಿದ್ದೆ. ಆಗ ನಮ್ಮ ಮನೆಯ ಬಾಗಿಲನ್ನು ಯಾರೋ ಜೋರಾಗಿ ತಳ್ಳಿದ ಶಬ್ದವಾಯಿತು. ಅವರನ್ನು ತಡೆಯಲು ನನ್ನ ಅಮ್ಮ ಪ್ರಯತ್ನ ಮಾಡುತ್ತಿದ್ದರು. ಕೂಗಾಟ ಕೇಳುತ್ತಿತ್ತು. ಆದರೆ ಉಗ್ರರು ಬಾಗಿಲನ್ನು ಅರ್ಧ ಮುರಿದು ಆಗಿತ್ತು. ನಂತರ ಅಪ್ಪನನ್ನು ಎಳೆದುಕೊಂಡು ಹೋದರು. ತಡೆಯಲು ಹೋದ ಅಮ್ಮನನ್ನು ಹೊರಗೆ ಎಳೆದರು. ನನಗೆ ತುಂಬ ಭಯವಾಗಿತ್ತು. ಆದರೆ ಬರುಬರುತ್ತ ನನಗೂ ಸಿಕ್ಕಾಪಟೆ ಸಿಟ್ಟು ಬಂತು. ಒಂದು ಕ್ಷಣವೂ ತಡ ಮಾಡದೆ ನಮ್ಮ ಮನೆಯೊಳಗೆ ಇದ್ದ ಗನ್​ ತೆಗೆದುಕೊಂಡು ಬಂದು ಒಂದೇ ಸಮ ಗುಂಡು ಹಾರಿಸಿದೆ. ಎಕೆ 47 ಗನ್​ನಲ್ಲಿ ಹೇಗೆ ಶೂಟ್​ ಮಾಡಬೇಕು ಎಂಬುದನ್ನು ಅಪ್ಪನಿಂದಲೇ ಕಲಿತಿದ್ದೆ ಎಂದಿದ್ದಾಳೆ. ಇದನ್ನೂ ಓದಿ: VIDEO: ಹೊತ್ತಿ ಉರಿಯುತ್ತಿದ್ದ ಅಪಾರ್ಟ್​ಮೆಂಟ್​ನ ಕಿಟಕಿಯಿಂದ ಹಾರಿದ ಇಬ್ಬರು ಮಕ್ಕಳು; ಮುಂದೇನಾಯ್ತು ನೋಡಿ

ಅಷ್ಟರಲ್ಲಿ ಇನ್ನೋರ್ವ ಉಗ್ರ ನನ್ನ ತಮ್ಮನೆಡೆಗೆ ಹೋಗುತ್ತಿದ್ದ. ಆಗ ನನ್ನ ಸೋದರ ನನ್ನಿಂದ ಗನ್​ ಕಸಿದುಕೊಂಡು ಗುಂಡು ಹಾರಿಸಿದ. ಆ ಉಗ್ರ ಗಾಯಗೊಂಡು ಓಡಲು ಶುರು ಮಾಡಿದ ಎಂದು ಕಮರ್​ ಘಟನೆಯನ್ನು ವಿವರಿಸಿದ್ದಾರೆ.

ಅಷ್ಟರಲ್ಲಿ ಇದು ದೊಡ್ಡ ಸುದ್ದಿಯಾಯಿತು. ಹಳ್ಳಿಯ ಜನರು, ಸರ್ಕಾರಿ ಸಿಬ್ಬಂದಿ, ಭದ್ರತಾ ಸಿಬ್ಬಂದಿ ನಮ್ಮ ಮನೆಗೆ ಬಂದರು ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಆತ ಪತ್ನಿಯನ್ನು ಕೊಲೆಮಾಡಿ ನಾಲೆಗೆ ಎಸೆದ.. ಕಾರಣವೇನು?

ನನ್ನ ತಂದೆ-ತಾಯಿಯನ್ನು ಕೊಂದವರನ್ನು ನಾನು ಹತ್ಯೆ ಮಾಡಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ. ನನಗೆ ಗೊತ್ತು, ಉಗ್ರರು ನನ್ನ ಮತ್ತು ಸೋದರನನ್ನು ಕೊಲ್ಲಲು ಮತ್ತೆ ಬರುತ್ತಾರೆ. ಆದರೆ ಖಂಡಿತ ಭಯವಿಲ್ಲ. ಯಾರೇ ಬಂದರೂ ಅವರೊಂದಿಗೆ ಹೋರಾಡಲು ಸಿದ್ಧನಿದ್ದೇನೆ ಎಂದಿದ್ದಾಳೆ.

ಬಾಲಕಿಯ ಶೌರ್ಯವನ್ನು ಜಗತ್ತಿನ ಅನೇಕ ಪತ್ರಿಕೆಗಳು ಹೊಗಳಿ ಬರೆದಿವೆ. ಅಫ್ಘಾನ್​ ಸರ್ಕಾರ ಕೂಡ ಶ್ಲಾಘಿಸಿದೆ. ಅವರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.(ಏಜೆನ್ಸೀಸ್​)