ನ್ಯೂಸ್

ಕಾಲ್ತುಳಿತ ಪ್ರಕರಣ; ನಟ ಅಲ್ಲು ಅರ್ಜುನ್​ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್​

ಹೈದರಾಬಾದ್​: ಡಿಸೆಂಬರ್​ 04ರಂದು ಪುಷ್ಪ-2 ಚಿತ್ರದ ಪ್ರೀಮಿಯರ್ ಶೋನಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್​ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಹೈದರಾಬಾದ್​​ನ ಸಂಧ್ಯಾ ಥಿಯೇಟರ್​ನಲ್ಲಿ ಪುಷ್ಪ-2 ಚಿತ್ರದ ಪ್ರೀಮಿಯರ್​ ಶೋ ವೇಳೆ ಕಾಲ್ತುಳಿತ ಸಂಭವಿಸಿತ್ತು. ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ನಿಧನ ಹೊಂದಿದ್ದು, ಅವರ ಮಗನ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಬಂಧ ಹೈದರಾಬಾದ್​ನ ಚೀಕಡಪಲ್ಲಿ ಪೊಲೀಸ್​ ಠಾಣೆಯಲ್ಲಿ ನಟನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ನಟ ಅಲ್ಲು ಅರ್ಜುನ್​ ವಿಷಾದ ವ್ಯಕ್ತಪಡಿಸಿ ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಇದಲ್ಲದೆ ಮಕ್ಕಳ ಶಿಕ್ಷಣ ಸೇರಿದಂತೆ ಆರ್ಥಿಕ ಸಹಾಯವನ್ನು ಮಾಡುವುದಾಗಿಯೂ ನಟ ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದರು. ಆದರೆ, ಘಟನೆ ಸಂಬಂಧ ಚೀಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲು ಅರ್ಜುನ್ ಅವರಿಗೆ ನ್ಯಾಯಾಂಗ ಬಂಧನ ನೀಡಿರುವುದು ಕೆಳ ಹಂತದ ಕೋರ್ಟ್. ಅವರು ಈಗಾಗಲೇ ತಮ್ಮ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದೊಮ್ಮೆ ಹೈಕೋರ್ಟ್ ಈ ಪ್ರಕರಣಕ್ಕೆ ತಡೆ ನೀಡಿದರೆ ಅಲ್ಲು ಅರ್ಜುನ್ ಅವರಿಗೆ ಬಿಗ್ ರಿಲೀಫ್ ಸಿಗಲಿದೆ.