ಸೂರತ್‌ನ ಉಧ್ನಾ ನಿಲ್ದಾಣದಲ್ಲಿ ಟಿಟಿಇ-ಪ್ರಯಾಣಿಕನ ಜಟಾಪಟಿ 
ನ್ಯೂಸ್

ಟಿಕೆಟ್ ಕೇಳಿದ್ದಕ್ಕೆ 'ಪರ್ಸ್ ಕಳ್ಳತನ'ದ ನಾಟಕ; ಪ್ರಯಾಣಿಕನ ಕಾಲರ್ ಹಿಡಿದ ಟಿಟಿಇ | Udhna Railway Incident

Udhna Railway Incident: ಗುಜರಾತ್‌ನ ಸೂರತ್‌ನಲ್ಲಿರುವ ಉಧ್ನಾ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರನ್ನು ತಡೆದಾಗ ಉಂಟಾದ ವಾಗ್ವಾದ ಮತ್ತು ಸಿಬ್ಬಂದಿ ಆತನ ಕಾಲರ್ ಹಿಡಿದಿದ್ದ ವಿಡಿಯೋ ವೈರಲ್ ಆಗಿದೆ.

ರೈಲ್ವೆ ಇಲಾಖೆಯ ಸ್ಪಷ್ಟನೆ ಪ್ರಕಾರ, ಉಧ್ನಾ ರೈಲು ನಿಲ್ದಾಣದ (Udhna Junction) ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ತವ್ಯದಲ್ಲಿದ್ದ ಸಿಸಿಟಿಸಿ (CCTC) ಅಜಯ್ ರಾಯ್ ಅವರು ಟಿಕೆಟ್ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ರೈಲು ಸಂಖ್ಯೆ 19418ರ ಅಹಮದಾಬಾದ್-ಬೊರಿವಲಿ ಎಕ್ಸ್‌ಪ್ರೆಸ್‌ನಿಂದ ಇಳಿದ ಪ್ರಯಾಣಿಕನೊಬ್ಬನ ಬಳಿ ಮಾನ್ಯವಾದ ಟಿಕೆಟ್ ಇರಲಿಲ್ಲ.

ಟಿಕೆಟ್ ಇಲ್ಲದೆ ಪ್ರಯಾಣ

ಟಿಕೆಟ್ ಇಲ್ಲದ ಕಾರಣ ನಿಯಮದಂತೆ ದಂಡ ಪಾವತಿಸುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ಪ್ರಯಾಣಿಕ ತನ್ನ ಪರ್ಸ್ ಕಳ್ಳತನವಾಗಿದೆ ಎಂದು ಹೇಳಿ ದಂಡ ಕಟ್ಟಲು ನಿರಾಕರಿಸಿದ್ದಾನೆ. ಅಲ್ಲದೆ, ಟಿಟಿಇ ಕಚೇರಿಗೆ ಬರದೆ ನಿಲ್ದಾಣದಿಂದ ಹೊರಹೋಗಲು ಪ್ರಯತ್ನಿಸಿದ್ದಾನೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕನ ಕಾಲರ್ ಹಿಡಿದ ಟಿಟಿಇ

ಈ ವೇಳೆ ಪ್ರಯಾಣಿಕನನ್ನು ತಡೆಯಲು ಮುಂದಾದ ಸಿಬ್ಬಂದಿ ಮತ್ತು ಆತನ ನಡುವೆ ಮಾತಿನ ಚಕಮಕಿ ಹಾಗೂ ನೂಕಾಟ ನಡೆದಿದೆ. ಈ ಸಂದರ್ಭದಲ್ಲಿ ಟಿಕೆಟ್ ಪರೀಕ್ಷಕರು ಪ್ರಯಾಣಿಕನ ಕಾಲರ್ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಘಟನೆಯ ಸಂಪೂರ್ಣ ಹಿನ್ನೆಲೆ ತಿಳಿಯದೆ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಖಾಕಿ ಮೇಲೆಯೇ ಪಿಟ್ ಬುಲ್ ಅಟ್ಯಾಕ್: ನಾಯಿಗೆ ಏನೂ ಮಾಡಬೇಡಿ ಎಂದು ಅಂಗಲಾಚಿದ ವ್ಯಕ್ತಿ | Pit Bull Attacks

ಪ್ರಯಾಣಿಕನಿಂದ 535 ರೂ. ದಂಡ ವಸೂಲಿ

ಗಲಾಟೆಯ ಬಳಿಕ ಪ್ರಯಾಣಿಕನನ್ನು ಟಿಟಿಇ ಕಚೇರಿಗೆ ಕರೆದೊಯ್ದು ವಿಚಾರಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ. ಬಳಿಕ ರಸೀದಿ (EFT No: F 0451885) ಮೂಲಕ 535 ರೂ. ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆ, ವೈರಲ್ ವಿಡಿಯೋದ ಅಸಲಿ ಹಿನ್ನೆಲೆ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟ ಚಿತ್ರಣ ನೀಡಿದೆ.