ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಪುನಶ್ಚೇತನ ಸಭೆ ಮಂಗಳವಾರ ನಡೆಯಿತು. ಸಚಿವ ಸಿ.ಸಿ.ಪಾಟೀಲ್, ನಿಗಮದ ಅಧ್ಯಕ್ಷ ಸಿದ್ದು ಸವದಿ, ನಿಗಮ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಇನ್ನು ಮುಂದೆ ಕನಿಷ್ಠ ಶೇ.25 ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಸಿದ್ಧಪಡಿಸಿದ ವಸ್ತ್ರಗಳನ್ನು ಖರೀದಿಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ನಿಗಮದ ಪುನಶ್ಚೇತನ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶಾಲಾ ಮಕ್ಕಳಿಗೆ ಸಮವಸ್ತ್ರ, ವಸತಿ ಶಾಲೆಗಳು, ಹಾಸ್ಟೆಲ್ಗಳಿಗೆ ಹೊದಿಕೆ ಹಾಗೂ ಹಾಸಿಗೆ ಸೇರಿ ಆರೋಗ್ಯ, ನಗರಾಭಿವೃದ್ಧಿ, ಪೌರಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಸತಿ ಶಿಕ್ಷಣ ಸಂಸ್ಥೆ ಇನ್ನಿತರ ಇಲಾಖೆಗಳು ಶೇ.100 ನಿಗಮದ ವಸ್ತ್ರಗಳ ಖರೀದಿ ವಿಷಯ ಪ್ರಸ್ತಾಪವಾಯಿತು. ವಿಸõತ ಚರ್ಚೆಯ ಬಳಿಕ ಕನಿಷ್ಠ ಶೇ.25 ಖರೀದಿ ಕಡ್ಡಾಯಗೊಳಿಸಿ, ಆಸಕ್ತ ಇಲಾಖೆಗಳು ಶೇ.100 ಖರೀದಿಗೆ ಅವಕಾಶ ಕಲ್ಪಿಸುವುದಕ್ಕೆ ಸಿಎಂ ಅಸ್ತು ಎಂದಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲು ಸೂಚಿಸಿದ್ದಾರೆ.
ಪ್ರಮುಖ ನಿರ್ಣಯಗಳು
- ನಿಗಮಕ್ಕೆ ವಿಧಿಸಿದ್ದ 6 ಕೋಟಿ ರೂ. ದಂಡದಲ್ಲಿ ಅರ್ಧದಷ್ಟು ಮನ್ನಾ ಮಾಡಲಾಗಿತ್ತು, ಇದೀಗ ಉಳಿದ ಮೂರು ಕೋಟಿ ರೂ. ಕೂಡ ಮನ್ನಾ
- ವಿದ್ಯಾ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸುತ್ತಿರುವ ನಿಗಮಕ್ಕೆ ವಾರ್ಷಿಕ 10 ಕೋಟಿ ರೂ. ನಷ್ಟದ ಹೊರೆ ಬೀಳಲಿದ್ದು, ಇದರಲ್ಲಿ 5 ಕೋಟಿ ರೂ. ಸರ್ಕಾರವೇ ಭರಿಸಲಿದೆ.
- ನಿಗಮದ ಅಭಿವೃದ್ಧಿ ಚಟುವಟಿಕೆಗಳು, ನಿವೃತ್ತರಿಗೆ ಪಿಂಚಣಿ, ಗ್ರಾಚ್ಯುಟಿ ಇನ್ನಿತರ ವೆಚ್ಚ ಭರಿಸಲು ಪಡೆದ 23 ಕೋಟಿ ರೂ. ಸಾಲಕ್ಕೆ 40 ಕೋಟಿ ರೂ. ಬಡ್ಡಿ ರೂಪದಲ್ಲಿ ನಿಗಮ ಭರಿಸಿದೆ. ಬಾಕಿ 23 ಕೋಟಿ ರೂ. ಷೇರು ಬಂಡವಾಳವಾಗಿ ಪರಿವರ್ತನೆ