ನ್ಯೂಸ್

ಸಿಎಂಎಸ್ ಹಣ ದರೋಡೆ ಪ್ರಕರಣ; ಮಾಸ್ಟರ್​ಮೈಂಡ್​ಗಳ ಬಂಧನ

ಲುಧಿಯಾನ: ಕ್ಯಾಶ್​ ಮ್ಯಾನೇಜ್​ಮೆಂಟ್​ ಸರ್ವೀಸ್​(CMS) ಕಚೇರಿಯಿಂದ ಕಳ್ಳರ ಗುಂಪೊಂದು 8.5 ಕೋಟಿ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರೋಡೆಯ ಮಾಸ್ಟರ್​ ಮೈಂಡ್​ಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂದೀಪ್​ ಕೌರ್​ ಅಲಿಯಾಸ್​ ಡಾಕು ರಾಣಿ, ಆಕೆಯ ಪತಿ ಜಸ್ವಿಂದರ್ ಸಿಂಗ್​ ಎಂದು ಗುರುತಿಸಲಾಗಿದ್ದು ಇವರಿಬ್ಬರನ್ನು ಉತ್ತರಾಖಂಡದ ಪ್ರಸಿದ್ಧ ಯಾತ್ರ ಸ್ಥಳ ಹೇಮಕುಂಟ್​​ ಸಾಹಿಬ್​ನಲ್ಲಿ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಜಾಣ ನಡೆ

ಈ ಕುರಿತು ಪ್ರತಿಕ್ರಿಯಿಸಿರುವ ಲುಧಿಯಾನ ಪೊಲೀಸ್ ಆಯುಕ್ತರಾದ ಮಂದೀಪ್​ ಸಿಂಗ್​ ಸಿಧು ದರೋಡೆಯ ನಂತರ ಆರೋಪಿಗಳು ಬೇರೆ ಬೇರೆ ರಾಜ್ಯಗಳಿಗೆ ಪರಾರಿಯಾಗಿದ್ದರು. ಪ್ರಕರಣದ ಮಾಸ್ಟರ್​ಮೈಂಡ್​ಗಳಾದ ಡಾಕು ರಾಣಿ ಹಾಗೂ ಆಕೆಯ ಪತಿ ಜಸ್ವಿಂದರ್​ ಉತ್ತರಾಖಂಡದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.

ಉತ್ತರಾಖಂಡದಲ್ಲಿರುವ ಸಿಖರ ಪ್ರಮುಖ ಧಾರ್ಮಿಕ ಸ್ಥಳ ಹೇಮಕುಂಟ್​​ ಸಾಹಿಬ್​ನಲ್ಲಿ ಭಕ್ತಾದಿಗಳಿಗೆ ಪ್ರತಿನಿತ್ಯ ಜ್ಯೂಸ್​ ವಿತರಿಸುತ್ತಿದ್ದಾಗಿ ಮಾಹಿತಿ ದೊರೆಯಿತ್ತು. ಕೂಡಲೇ ನಮ್ಮ ಅಧಿಕಾರಿಗಳ ತಂಡ ತೆರಳಿ ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ಧಾರೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಫ್ರೂಟಿ ನೀಡುವ ನೆಪದಲ್ಲಿ ದಂಪತಿಗಳಿಬ್ಬರನ್ನು ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದ್ಧಾರೆ.

ಆರೋಪಿಗಳಿಂದ 5.96 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಲುಧಿಯಾನ ಪೊಲೀಸ್​ ಆಯುಕ್ತ ಮಂದೀಪ್​ ಸಿಂಗ್​ ಸಿಧು ತಿಳಿಸಿದ್ದಾರೆ.