ನ್ಯೂಸ್

ಸಾಲ ಶೂಲ: ಆರ್ಥಿಕ ಸಂಕಷ್ಟದಲ್ಲಿ ಪಂಜಾಬ್

ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಪಂಜಾಬ್ ಈಗ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಹೆಚ್ಚುತ್ತಿರುವ ಸಾಲ ಮತ್ತು ಹೆಚ್ಚುತ್ತಿರುವ ಬಡ್ಡಿ ಪಾವತಿ ಹೊರೆಯಿಂದ ಜಝುರಿತಗೊಂಡಿದೆ. ರಾಜ್ಯದ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಸಾಲ ಮರುಪಾವತಿಗೆ ತಡೆ ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ, ಅಂದರೆ 2023ರ ಮಾರ್ಚ್ ಹೊತ್ತಿಗೆ ಪಂಜಾಬ್​ನ ಸಾಲವು 3.12 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು 15,946 ಕೋಟಿ ರೂಪಾಯಿ ಅಸಲು ಮತ್ತು 20,100 ಕೋಟಿ ರೂಪಾಯಿ ಬಡ್ಡಿ ಪಾವತಿಸಿದೆ. ಪ್ರಸಕ್ತ ಹಣಕಾಸು ವರ್ಷದ ಅಂದಾಜಿನ ಪ್ರಕಾರ 16,626 ಕೋಟಿ ರೂಪಾಯಿ ಅಸಲು ಮತ್ತು 22,000 ಕೋಟಿ ರೂಪಾಯಿಯನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ. ಇದು ಆ ರಾಜ್ಯದ ವಾರ್ಷಿಕ ಬಜೆಟ್​ನ ಅಂದಾಜು ಶೇಕಡ 20ರಷ್ಟಾಗುತ್ತದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಅಕಾಲಿಗಳು ರಾಜ್ಯವನ್ನು ಆಳಿದ ಅವಧಿಯಲ್ಲಿ, ರಾಜ್ಯದ ಸಾಲವು ಅಂದಾಜು ಹತ್ತು ಪಟ್ಟು ಹೆಚ್ಚಾಗಿದೆ. 2002ರಲ್ಲಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ಬಾಕಿಯಿರುವ ಸಾಲವು 36,854 ಕೋಟಿ ರೂಪಾಯಿ ಆಗಿತ್ತು. ಎಸ್​ಎಡಿ-ಬಿಜೆಪಿ ಸರ್ಕಾರದ ಆಡಳಿತದ ನಂತರದಲ್ಲಿ 2017ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯವು 2.08 ಲಕ್ಷ ಕೋಟಿ ಸಾಲದ ಹೊರೆ ಹೊತ್ತಿತ್ತು. ತದನಂತರದ ಕಾಂಗ್ರೆಸ್ ಆಡಳಿತದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಸಾಲ ಮತ್ತೆ 1 ಲಕ್ಷ ಕೋಟಿ ರೂಪಾಯಿ ಹೆಚ್ಚಾಯಿತು.

ಸಾಲ ಮರುಪಾವತಿಗಾಗಿಯೂ ಸಾಲ: ವಾಸ್ತವವಾಗಿ ಪಂಜಾಬ್ ಸರ್ಕಾರವು ಈಗಾಗಲೇ ಹೊಂದಿರುವ ಸಾಲವನ್ನು ಮರುಪಾವತಿಸಲು ಪ್ರತಿ ವರ್ಷ ಹಣವನ್ನು ಎರವಲು ಪಡೆಯಬೇಕಾದ ದುಸ್ಥಿತಿಗೆ ತಲುಪಿದೆ. ಇದು ಈಗಾಗಲೇ ಹಣಕಾಸಿನ ಕೊರತೆಯನ್ನು ಎದುರಿಸುತ್ತಿರುವ ರಾಜ್ಯದ ಮೇಲೆ ಅಪಾರ ಒತ್ತಡವನ್ನು ಸೃಷ್ಟಿಸಿದೆ, ಪರಿಸ್ಥಿತಿ ಬದಲಾಗದಿದ್ದರೆ, ಪಂಜಾಬ್​ನ ಸಾಲವು ಎರಡು ವರ್ಷಗಳಲ್ಲಿ 4 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟುತ್ತದೆ ಎಂದು ಅಂದಾಜಿಸಲಾಗಿದೆ.

ವಿದ್ಯುತ್ ಸಬ್ಸಿಡಿಯ ಹೊರೆ: ಸರ್ಕಾರ ಒದಗಿಸಿದ ಫ್ರೀಬೀಸ್ (ಉಚಿತ ಕೊಡುಗೆಗಳು), ವಿಶೇಷವಾಗಿ ವಿದ್ಯುತ್ ಸಬ್ಸಿಡಿಗಳು ಸಾಲದ ಬಿಕ್ಕಟ್ಟಿಗೆ ಗಮನಾರ್ಹ ಕೊಡುಗೆ ನೀಡಿವೆ. 1997ರಲ್ಲಿ ಅಂದಿನ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಲ್ ಅವರು ಕೃಷಿಗೆ ಉಚಿತ ವಿದ್ಯುತ್ ಘೊಷಿಸಿದಾಗಿನಿಂದಲೂ ರಾಜ್ಯದ ಬೊಕ್ಕಸವನ್ನು ವಿದ್ಯುತ್ ಸಬ್ಸಿಡಿಯು ಬರಿದು ಮಾಡುತ್ತ ಬಂದಿದೆ. ಕಳೆದ 26 ವರ್ಷಗಳಲ್ಲಿ ರೈತರು,

ಎಸ್​ಸಿಗಳು ಮತ್ತು ಉದ್ಯಮಗಳಿಗೆ ನೀಡಲಾಗಿರುವ ವಿದ್ಯುತ್ ಸಬ್ಸಿಡಿಯ ಮೊತ್ತವು 1.38 ಲಕ್ಷ ಕೋಟಿ ರೂಪಾಯಿ ಆಗುತ್ತದೆ. 1997-98ರ ಹಣಕಾಸು ವರ್ಷದಲ್ಲಿ 604.57 ಕೋಟಿ ರೂಪಾಯಿಗಳಿಂದ ಪ್ರಾರಂಭವಾದ ವಿದ್ಯುತ್ ಸಬ್ಸಿಡಿ ಮೊತ್ತವು ಕಳೆದ ಹಣಕಾಸು ವರ್ಷದ ಅಂತ್ಯದ ವೇಳೆಗೆ 20,000 ಕೋಟಿ ರೂಪಾಯಿಗಳ ಗಡಿ ದಾಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿದ್ಯುತ್ ಸಬ್ಸಿಡಿಗಾಗಿ 20243.76 ಕೋಟಿ ರೂಪಾಯಿ ಮತ್ತು ಮಹಿಳೆಯರಿಗೆ ಉಚಿತ ಸಾರಿಗೆಗಾಗಿ 547 ಕೋಟಿ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ.

ನೆರವು ಕೋರಿ ರಾಜ್ಯಪಾಲರಿಗೆ ಸಿಎಂ ಪತ್ರ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಬೆಳೆಯುತ್ತಿರುವ ಸಾಲದ ಮರುಪಾವತಿ ಮೇಲೆ ಐದು ವರ್ಷಗಳ ಕಾಲ ನಿಷೇಧವನ್ನು ಪಡೆಯಲು ನೆರವನ್ನು ಕೋರಿದ್ದಾರೆ. ಈ ಹಣಕಾಸು ವರ್ಷದ ಕೊನೆಯಲ್ಲಿ ಸಾಲದ ಪ್ರಮಾಣವು 3.27 ಲಕ್ಷ ಕೋಟಿ ರೂಪಾಯಿಗೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ‘ಪಂಜಾಬ್​ನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಕನಿಷ್ಠ ಐದು ವರ್ಷಗಳ ಕಾಲ ರಾಜ್ಯದ ಸಾಲ ಮರುಪಾವತಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲು ಪ್ರಧಾನಮಂತ್ರಿಯವರಿಗೆ ಮನವರಿಕೆ ಮಾಡಿಕೊಡುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದು ರಾಜ್ಯದ ಒತ್ತಡದ ಆರ್ಥಿಕ ಸ್ಥಿತಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನೀಡುತ್ತದೆ. ಅಲ್ಲದೆ, ಆದಾಯದ ಬೆಳವಣಿಗೆ ಮತ್ತು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ನಿಮ್ಮ ಸರ್ಕಾರಕ್ಕೆ ಸ್ವಲ್ಪ ಹಣಕಾಸಿನ ನೆರವನ್ನು ನೀಡುತ್ತದೆ’ ಎಂದು ಮಾನ್ ಅವರು ಪತ್ರದಲ್ಲಿ ವಿವರಿಸಿದ್ದಾರೆ. ‘ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದಾಗ ಮಾರ್ಚ್ 2022 ರಿಂದ ಸಾಲ ಸೇವೆಗೆ ಈಗಾಗಲೇ 27,106 ಕೋಟಿ ರೂಪಾಯಿಗಳನ್ನು ಪಾವತಿಸಿದೆ’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

ಬಂಡಾಯ ಕಾಲದ ಬಳುವಳಿ: ಪಂಜಾಬ್ ರಾಜ್ಯದ ಸಾಲದ ಇತಿಹಾಸದ ಮೂಲವು ಪ್ರತ್ಯೇಕವಾದಿ ಬಂಡುಕೋರರ ದಂಗೆ ಮತ್ತು ಭಯೋತ್ಪಾದನೆ ರಾಜ್ಯದಲ್ಲಿ ಉಚ್ಛಾ ›ಯ ಸ್ಥಿತಿಯಲ್ಲಿದ್ದ ಕಾಲಕ್ಕೆ ಹೋಗುತ್ತದೆ. ಭಯೋತ್ಪಾದನೆ ಎದುರಿಸಲು 1984 ಮತ್ತು 1994ರ ನಡುವೆ ಒಟ್ಟು 5,800 ಕೋಟಿ ರೂಪಾಯಿ ಸಾಲವನ್ನು ಪಂಜಾಬ್​ಗೆ ಒದಗಿಸಲಾಗಿತ್ತು. ಭಯೋತ್ಪಾದನೆ ಮಟ್ಟ ಹಾಕಲು ಭದ್ರತಾ ಸಂಬಂಧಿ ವೆಚ್ಚಗಳು ತನ್ನ ಸಾಲ ಹೆಚ್ಚಳಕ್ಕೆ ಕಾರಣವಾದವು ಎಂಬುದು ಪಂಜಾಬ್ ರಾಜ್ಯ ಸರ್ಕಾರದ ವಾದವಾಗಿದ್ದು, ಕೇಂದ್ರ ಸರ್ಕಾರವೂ ಈ ಹೊರೆಯನ್ನು ಹಂಚಿಕೊಳ್ಳಬೇಕು ಎಂದು ಒತ್ತಾಯಿಸುತ್ತ ಬಂದಿವೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಪಂಜಾಬ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಅದರ ಹೊರೆಯನ್ನು ರಾಜ್ಯ ಸರ್ಕಾರದ ಮೇಲೆ ಹೇರಿತು ಎಂದು ಈ ಹಿಂದಿನ ಎಸ್​ಎಡಿ-ಬಿಜೆಪಿ ಸರ್ಕಾರವು ಆರೋಪಿಸಿತ್ತು. ಆದರೆ, ಕೇಂದ್ರ ಸರ್ಕಾರ ಈ ಸಾಲವನ್ನು ಎರಡು ಬಾರಿ ಮನ್ನಾ ಮಾಡಿದೆ ಎಂಬುದು ಗಮನಾರ್ಹ.

ಅರ್ಥಶಾಸ್ತ್ರಜ್ಞರ ಸಲಹೆ: ಪಂಜಾಬ್​ನ ಬಡ್ಡಿ ಪಾವತಿಯ ಹೊರೆಯನ್ನು ತಗ್ಗಿಸಲು ಆರಂಭಿಕ ಹಂತವಾಗಿ ಸಾಲ ಮರುಪಾವತಿಯ ಮೇಲೆ ತಾತ್ಕಾಲಿಕ ನಿಷೇಧವನ್ನು ಜಾರಿಗೆ ತರಬೇಕೆಂದು ಅರ್ಥಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. ಪಂಜಾಬ್​ನ ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರದಿಂದ ವಿಶೇಷ ಹಣಕಾಸು ಪ್ಯಾಕೇಜ್ ಅತ್ಯಗತ್ಯ ಎಂದೂ ಅವರು ಹೇಳುತ್ತಾರೆ. ಈ ಆರ್ಥಿಕ ಪುನಶ್ಚೇತನವು ಖಾಸಗಿ ಹೂಡಿಕೆಗಳನ್ನು ಆಕರ್ಷಿಸಿ, ರಾಜ್ಯದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸಲು ನೆರವಾಗುತ್ತದೆ ಎಂಬುದು ಅವರ ನಿರೀಕ್ಷೆಯಾಗಿದೆ.