ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಸಿನಿಮ ಬಿಡುಗಡೆಗೂ ಮುನ್ನ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಚಿತ್ರ ಬಿಡುಗಡೆ ವಿಚಾರ ಬಂದಾಗೆಲ್ಲ ಒಂದಲ್ಲ ಒಂದು ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಲೆ ಇದೆ. ಈ ಮಧ್ಯೆ ಎಮರ್ಜೆನ್ಸಿ ಸಿನಿಮಾ ಬಿಡುಗಡೆಯನ್ನು ತಡೆಯುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣದ ವಿಚಾರಣೆ ವೇಳೆ ಚಿತ್ರ ಬಿಡುಗಡೆಗೆ ಮುನ್ನ ಸೆನ್ಸಾರ್ ಮಂಡಳಿಯು ಇನ್ನೂ ಪ್ರಮಾಣಪತ್ರ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಎಮರ್ಜೆನ್ಸಿ ಸಿನಿಮಾದ ವಿರುದ್ಧ ದೂರುಗಳು ಬಂದಿದ್ದು ಅವುಗಳನ್ನು ಪರಿಶೀಲಿಸುತ್ತಿರುವುದಾಗಿ ಸೆನ್ಸಾರ್ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದೆ. ಸಿಖ್ ಧರ್ಮದ ಭಾವನೆಗಳಿಗೆ ವಿರುದ್ಧವಾಗಿ ಏನಾದರೂ ಕಂಡುಬಂದರೆ ಆ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲಾಗುತ್ತದೆ ಎಂದು ಸರ್ಕಾರದ ಪರವಾಗಿ ಹೈಕೋರ್ಟ್‌ಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ತಿಳಿಸಿದರು.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಯಾವುದೇ ಚಲನಚಿತ್ರಕ್ಕೆ ಪ್ರಮಾಣಪತ್ರಗಳನ್ನು ನೀಡುವ ಮೊದಲು ಧಾರ್ಮಿಕ ಅಥವಾ ಯಾವುದೇ ಇತರ ಗುಂಪಿನ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಜೈನ್ ಕೋರ್ಟ್ಗೆ ಹೇಳಿದರು.
ಎಮರ್ಜೆನ್ಸಿ ಸಿನಿಮಾದಲ್ಲಿ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕಾಗಿ ವಿವಾದಗಳಲ್ಲಿ ಸಿಲುಕುತ್ತಿದೆ. ಸಿನಿಮಾದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ತೋರಿಸಿರುತ್ತಾರೆ ಎಂದು ಶಿರೋಮಣಿ ಅಕಾಲಿಕದಳವು ನಿಷೇಧಕ್ಕೆ ಕರೆ ನೀಡಿತು. ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಅನುಮತಿ ನೀಡದಿರುವಾಗ ಅರ್ಜಿಯನ್ನು ಇನ್ನೂ ವಿಚಾರಣೆ ನಡೆಸಲಾಗುವುದಿಲ್ಲ. ಚಿತ್ರ ಬಿಡುಗಡೆಯಾದ ನಂತರ ನಿಮ್ಮ ಆಕ್ಷೇಪಣೆಗಳ ಬಗ್ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ಹೈಕೋರ್ಟ್ ಅರ್ಜಿದಾರ ವಕೀಲ ಇಮಾನ್ ಸಿಂಗ್ ಖಾರಾಗೆ ತಿಳಿಸಿದೆ.
ಕಂಗನಾ ರಣಾವತ್ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್ 6ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಪ್ರಮಾಣ ಪತ್ರ ಸಿಗದೆ ಇರುವುದರಿಂದ ಸಿನಿಮಾ ಬಿಡುಗಡೆ ಮತ್ತುಷ್ಟು ತಡವಾಗಬಹುದು ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)