ಅಮೃತ್ಸರ್: ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಭಯ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಒಂದಿಲ್ಲೊಂದು ನೆಪ ಹೂಡುತ್ತಲೇ ಇರುತ್ತಾರೆ. ಇದೀಗ ಅಮೃತ್ಸರದ ಮೂವರು ವಿದ್ಯಾರ್ಥಿಗಳು ಸೇರಿಕೊಂಡು ಪ್ರಾಂಶುಪಾಲರಿಗೆ ಬಾಂಬ್ ಬೆದರಿಕೆ ಒಡ್ಡಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಮೂವರು ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಶಾಲೆಯಲ್ಲಿ ಬಾಂಬ್ ಇದೆ ಎಂದು ಸಂದೇಶ ಕಳುಹಿಸಿದ್ದಾರೆ. ಗಾಬರಿಯಾದ ಪ್ರಾಂಶುಪಾಲರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಸೆಕ್ಷನ್ 262, 506 ಮತ್ತು 507ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಪೊಲೀಸರು ಮುಂಬರುವ ಪರೀಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಹುಸಿ ಬಾಂಬ್ ಬೆದರಿಕೆ ಒಡ್ಡಿದ್ದಾರೆ. ಸದ್ಯ ಇನ್ನಿಬ್ಬರು ವಿದ್ಯಾರ್ಥಿಗಳ ಪತ್ತೆಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
ಈ ಪ್ರಕರಣದ ನಂತರ ಅಮೃತ್ಸರದ ಎಲ್ಲಾ ಶಾಲೆಯಲ್ಲೂ ಭಧ್ರತೆ ಬಿಗಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಗೂಗಲ್ ಸಹಾಯದಿಂದ ಇಂಗ್ಲೀಷ್ ಹಾಗೂ ಉರ್ದು ಭಾಷೆಗೆ ಸಂದೇಶ ಭಾಷಾಂತರಿಸಿದ್ದಾರೆ. ನಂತರ ನಕಲಿ ಇನ್ಸ್ಸ್ಟಾಗ್ರಾಂ ಖಾತೆ ಮೂಲಕ ಪ್ರಾಂಶುಪಾಲರಿಗೆ ಸಂದೇಶ ಕಳುಹಿಸಿ ಈ ಕೃತ್ಯ ಮಾಡಿದ್ದಾರೆ. ಪೋಷಕರು ತಮ್ಮ ಮಕ್ಕಳ ಮೇಲೆ ಗಮನ ನೀಡಬೇಕು. ಮಕ್ಕಳ ಮೊಬೈಲ್ ಚಟುವಟಿಕೆಗಳ ಮೇಲೆ ದೃಷ್ಟಿಹಾಯಿಸುತ್ತಿರಬೇಕು ಎಂದು ಡಿಸಿಪಿ ಎಮ್.ಎಸ್. ಬುಲ್ಲಾರ್ ತಿಳಿಸಿದ್ದಾರೆ. (ಏಜೆನ್ಸೀಸ್)