ಭೋಪಾಲ್: ಕೊರೊನಾ ಸೋಂಕಿನಿಂದಾಗಿ ದೇಶಾದ್ಯಂತ ಲಾಕ್ಡೌನ್ ಜಾರಿಯದ್ದರೂ ನಿಯಮ ಉಲ್ಲಂಘನೆ ಹಾಗೂ ಅದೇ ಕಾರಣದಿಂದಾಗಿ ಶಿಕ್ಷೆ, ಅಮಾನತು, ಅಷ್ಟೇ ಏಕೆ ಕೊಲೆಯಂತಹ ಅಮಾನವೀಯ ಘಟನೆಗಳೂ ನಡೆಯುತ್ತಿವೆ.
ಈಗ ಕರ್ಫ್ಯೂ ಜಾರಿಯಲ್ಲಿದ್ದ ಸ್ಥಳದಲ್ಲಿ ಸಮಯ ಮೀರಿ ಅಂಗಡಿ ತೆರೆದಿದ್ದ 71 ವರ್ಷ ವಯಸ್ಸಿನ ವೃದ್ಧನಿಗೆ ಪೊಲೀಸ್ ಒಬ್ಬರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಪರ ಹಾಗೂ ವಿರೋಧಗಳೂ ಕೇಳಿಬರುತ್ತಿವೆ.
ಈ ಘಟನೆ ನಡೆದದ್ದು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ. ವೃದ್ಧನಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ವೀಡಿಯೋ ನೋಡಿ ಪೊಲೀಸ್ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ವೃದ್ಧನಿಗೆ ಈ ಪರಿ ಶಿಕ್ಷೆ ನೀಡಿದ್ದು ನೈತಿಕ ಕರ್ತವ್ಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ. ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರಿಂದ ನಿಯಮಗಳ ಉಲ್ಲಂಘನೆ, ಕೊಲೆ, ಸುಲಿಗೆ, ಪೊಲೀಸರಿಂದ ಲಾಠಿ ಏಟು ಇಂಥ ಅದೆಷ್ಟೋ ಪ್ರಸಂಗಗಳು ನಡೆದಿವೆ.