ನ್ಯೂಸ್

ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ... ಕನ್ನಡದಲ್ಲೇ ಪುನೀತ್​ರನ್ನ ನೆನೆದ ಅರವಿಂದ್​ ಕೇಜ್ರಿವಾಲ್​

arunakunigal

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಪಾಲಿನ 'ರಾಜಕುಮಾರ', ಕನ್ನಡಿಗರ ಪ್ರೀತಿಯ 'ಅಪ್ಪು', ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ(ಅ.29) ಒಂದು ವರ್ಷ. ಅವರ ನೆನಪಲ್ಲೇ ಅಭಿಮಾನಿಗಳು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಅಪ್ಪುಗಾಗಿ ಮಿಡಿಯುತ್ತಿದ್ದಾರೆ.

ಅಪ್ಪು ಸಮಾಧಿ ಸ್ಥಳಕ್ಕೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಅನ್ನದಾನ, ನೇತ್ರದಾನದಂತಹ ಮಹತ್ಕಾರ್ಯ ನಡೆಸುತ್ತಲೇ ಇದ್ದಾರೆ. ದೇವರ ಮನೆಯಲ್ಲಿ ಅಪ್ಪು ಫೋಟೋ ಇಟ್ಟು ಪೂಜಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಅಪ್ಪು, ಪುನೀತ್​ ಎಂಬ ಹೆಸರಿಟ್ಟು ಅಪ್ಪುವನ್ನ ಮಕ್ಕಳಲ್ಲಿ ನೋಡುತ್ತಿರುವವರಿಗೆ ಲೆಕ್ಕವಿಲ್ಲ. ಪುಟ್ಟಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ, ಸಾಮಾನ್ಯರಿಂದ ಗಣ್ಯರವರೆಗೂ ಅಪ್ಪು ನೆನೆದು ಕಂಬನಿ ಮಿಡಿಯುತ್ತಲೇ ಇದ್ದಾರೆ, ಅಪ್ಪುಗೆ ನಮಿಸುತ್ತಲೇ ಇದ್ದಾರೆ. ದೆಹಲಿ ಸಿಎಂ ಕೂಡ ಕನ್ನಡದಲ್ಲೇ ಅಪ್ಪುವನ್ನು ಸ್ಮರಿಸಿದ್ದಾರೆ.

ಕನ್ನಡದಲ್ಲೇ ಟ್ವೀಟ್​ ಮಾಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, 'ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ' ಎಂದಿದ್ದಾರೆ. 'ಇಂದು ಡಾ.ಪುನೀತ್ ರಾಜ್​ಕುಮಾರ್​ ಅವರ ಪುಣ್ಯತಿಥಿ. ಅವರ ನೆನಪು ನನ್ನನ್ನು ಗಾಢವಾಗಿ ಕಾಡುತ್ತಿದೆ. ಪುನೀತ್​ ಅವರ ಸಿನಿಮಾ, ಹಾಡು, ದಯೆ ಮತ್ತು ಸಾಮಾಜಿಕ ಕಾರ್ಯಗಳನ್ನು ನೋಡಿದರೆ ಅವರು ನಮ್ಮನ್ನು ಎಂದಿಗೂ ತೊರೆದಿಲ್ಲ. ಅವರು ನಮ್ಮೊಂದಿಗೇ ಇದ್ದಾರೆ ಅನಿಸುತ್ತದೆ. ಅವರು ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್' ಎಂದು ಕೇಜ್ರಿವಾಲ್​ ಬರೆದುಕೊಂಡಿದ್ದಾರೆ.