Car EMI : ಪುಣೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪತಿ-ಪತ್ನಿ ಇಬ್ಬರೂ ಸರ್ಕಾರದ ಉನ್ನತ ಹುದ್ದೆಯಲ್ಲಿರುವವರು. ಆದರೆ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಅವರಿಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಹಣ ಕೇಳಿದರೂ ಪತ್ನಿ ಕೊಡದಿದ್ದಾಗ ಕೋಪಗೊಂಡ ಪತಿ, ಆಕೆಯ ಜೊತೆ ತುಂಬಾ ಕೆಟ್ಟದಾಗಿ ವರ್ತಿಸಿದ್ದಾನೆ. ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿ, ಪತ್ನಿಯ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಸೆರೆಹಿಡಿದು, ಅವುಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ. ಸದ್ಯ ಈ ಘಟನೆ ಪುಣೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಈ ಘಟನೆ ಪುಣೆಯ ಅಂಬೆಗಾಂವ್‌ನಲ್ಲಿ ನಡೆದಿದೆ. ದಂಪತಿ 2020ರಲ್ಲಿ ವಿವಾಹವಾದರು. ಇಬ್ಬರೂ ಉನ್ನತ ಸರ್ಕಾರಿ ಅಧಿಕಾರಿಗಳು. ಕಾರು ಮತ್ತು ಮನೆಯ ಇಎಂಐ ಪಾವತಿಸಲು ಹಣ ನೀಡುವಂತೆ ತನ್ನ ಹೆಂಡತಿಯ ಬಳಿ ಗಂಡ ಒತ್ತಾಯಿಸಿದನು. ಹೆತ್ತವರ ಮನೆಯಿಂದಲೂ 1.5 ಲಕ್ಷ ರೂ. ತೆಗೆದುಕೊಂಡು ಬರುವಂತೆ ಒತ್ತಡ ಹೇರಿದನು. ಆದರೆ, ಇದ್ಯಾವುದಕ್ಕೂ ಆಕೆ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಪತಿ, ಕೊನೆಗೆ ನೀಚ ಕೃತ್ಯಕ್ಕೆ ಇಳಿದನು.
ಮನೆಯ ಸ್ನಾನಗೃಹದಲ್ಲಿ ಗಂಡ, ಗುಪ್ತ ಕ್ಯಾಮೆರಾ ಅಳವಡಿಸಿದ. ಪತ್ನಿ ಸ್ನಾನ ಮಾಡುತ್ತಿದ್ದಾಗ ಕದ್ದು ಆಕೆಯ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ. ಬಳಿಕ ಆ ವಿಡಿಯೋಗಳನ್ನು ಪತ್ನಿಗೆ ತೋರಿಸಿ ಕಾರು ಮತ್ತು ಮನೆಯ ಇಎಂಐಗಳಿಗೆ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಲು ಆರಂಭಿಸಿದ. ಅಲ್ಲದೆ, ಆರೋಪಿ ಪತಿ, ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಯನ್ನು ಸಹ ನೀಡಿದ್ದಾನೆ.
ಗಂಡನ ಈ ಕೃತ್ಯದಿಂದ ಆಘಾತಕ್ಕೊಳಗಾದ ಪತ್ನಿ, ತನ್ನ ಮೇಲಿನ ದೌರ್ಜನ್ಯವನ್ನು ಸಹಿಸದೇ ಆಕ್ರೋಶ ಹೊರಹಾಕಿದಳು. ಪೊಲೀಸ್ ಠಾಣೆಗೆ ಹೋಗಿ ಪತಿ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಿಸಿದ್ದಾಳೆ. ಪತಿ ಮತ್ತು ಆತನ ಕುಟುಂಬ ಸದಸ್ಯರು ಕೆಲವು ಸಮಯದಿಂದ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 30 ವರ್ಷದ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಪತ್ನಿಯ ದೂರಿನ ಆಧಾರದ ಮೇಲೆ, ಪೊಲೀಸರು ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)