ನ್ಯೂಸ್

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಅವಹೇಳನಕಾರಿ ಹೇಳಿಕೆ: ವಿದ್ಯಾರ್ಥಿನಿ ಬಂಧನ! Operation Sindoor

Operation Sindoor : ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತ ಸಾಮಾಜಿಕ ಜಾಲತಾಣ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಶುಕ್ರವಾರ (ಮೇ 30) ರಾತ್ರಿ ಪುಣೆ ಮೂಲದ ಕಾನೂನು ವಿದ್ಯಾರ್ಥಿನಿಯನ್ನು ಗುರುಗ್ರಾಮ್‌ನಲ್ಲಿ ಕೋಲ್ಕತ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ, ಬಂಧಿತ ವಿದ್ಯಾರ್ಥಿಯನ್ನು ಶರ್ಮಿಷ್ಠ ಪನೋಲಿ ಎಂದು ಗುರುತಿಸಲಾಗಿದೆ. ಸದ್ಯ ವಿಡಿಯೋವನ್ನು ಡಿಲೀಟ್​ ಮಾಡಲಾಗಿದೆ. ಆರೋಪಿ ಪನೋಲಿ, ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಅಗೌರವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ವಿಡಿಯೋ ವೈರಲ್ ಆದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿ, ಕೋಲ್ಕತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಎಫ್‌ಐಆರ್ ಸಹ ದಾಖಲಾಗಿತ್ತು.

ಪನೋಲಿ ಮತ್ತು ಆಕೆಯ ಕುಟುಂಬ ಪರಾರಿಯಾಗಿದ್ದರಿಂದ ಆಕೆಗೆ ಕಾನೂನು ನೋಟಿಸ್ ಜಾರಿ ಮಾಡಲು ಪದೇಪದೆ ಮಾಡಿದ ಪ್ರಯತ್ನಗಳು ವಿಫಲವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಬಳಿಕ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತು, ಅದರ ಆಧಾರದ ಮೇಲೆ ಗುರುಗ್ರಾಮದಿಂದ ಆಕೆಯನ್ನು ಬಂಧಿಸಲಾಗಿದೆ.

ಆದಾಗ್ಯೂ, ವಿವಾದದ ನಂತರ, ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ ಮತ್ತು ಅವರ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದಾರೆ.

ನಾನಿಲ್ಲಿ ಬೇಷರತ್ತಾದ ಕ್ಷಮೆಯಾಚಿಸುತ್ತೇನೆ. ಏನೇ ಬರೆದಿದ್ದರೂ ಅದು ನನ್ನ ವೈಯಕ್ತಿಕ ಭಾವನೆಗಳು ಮತ್ತು ನಾನು ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸಲು ಬಯಸಲಿಲ್ಲ, ಆದ್ದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅದಕ್ಕಾಗಿ ವಿಷಾದಿಸುತ್ತೇನೆ. ಇನ್ನು ಮುಂದೆ, ನಾನು ನನ್ನ ಸಾರ್ವಜನಿಕ ಪೋಸ್ಟ್‌ನಲ್ಲಿ ಜಾಗರೂಕನಾಗಿರುತ್ತೇನೆ. ಮತ್ತೊಮ್ಮೆ, ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ ಎಂದು ಪನೋಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)